ಚಿಕ್ಕಮಗಳೂರು: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಸಹ ಭಾರಿ ಮಳೆ ಸುರಿಯುತ್ತಿದ್ದು, ಪರಿಣಾಮ ಹತ್ತಾರು ಜಲಪಾತಗಳು ತುಂಬಿ ತುಳುಕುತ್ತಿವೆ.
ಮೋಜು, ಮಸ್ತಿಗೆ ಎಂದು ಚಾರ್ಮಾಡಿ ಘಾಟ್ಗೆ ಬಂದಂತಹ ಪ್ರವಾಸಿಗರಿಗೆ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಬ್ರೇಕ್ ಹಾಕಿದ್ದು, ಗಸ್ತು ತಿರುಗಾಟ ಪ್ರಾರಂಭಿಸಿದ್ದಾರೆ. ಚಾರ್ಮಾಡಿ ಘಾಟ್ನ ವ್ಯೂ ಪಾಯಿಂಟ್ನಲ್ಲೇ ಹೈವೇ ಪೆಟ್ರೋಲ್(ಹೆದ್ದಾರಿ ವೀಕ್ಷಣ ವಾಹನ) ಪೊಲೀಸ್ ವಾಹನ ಬೀಡು ಬಿಟ್ಟಿದೆ. ಯಾರು ಜಲಪಾತಗಳಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಕಳೆದ ವಾರ ಈ ಭಾಗದಲ್ಲಿ ಕೆಲ ಯುವಕರು ರಸ್ತೆ ಮಧ್ಯೆಯೇ ಕಾರಿನಲ್ಲಿ ಹಾಡುಗಳನ್ನು ಹಾಕಿಕೊಂಡು ಡ್ಯಾನ್ಸ್ ಮಾಡಿದ್ದರು. ಪ್ರವಾಸಿಗರ ಮಿತಿಮೀರಿದ ವರ್ತನೆಯಿಂದ ವಾಹನ ಸವಾರರು ತೊಂದರೆ ಅನುಭವಿಸಿದರು. ಜೊತೆಗೆ ಟ್ರಾಫಿಕ್ ಜಾಮ್ ಸಮಸ್ಯೆ ಕೂಡ ಉಂಟಾಗಿತ್ತು. ಈ ಹಿನ್ನೆಲೆ ಇದೀಗ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇನ್ನು ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿರುವ ಜಲಪಾತಗಳಿಗೆ ಜೀವಕಳೆ ಬಂದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹತ್ತಾರು ಕಡೆ ಕೃತಕ ಜಲಪಾತಗಳು ನಿರ್ಮಾಣವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ.