ಚಿಕ್ಕಮಗಳೂರು: ಶಿವಮೊಗ್ಗದಲ್ಲಿ ಫೆಬ್ರವರಿ 20 ರಂದು ಹತ್ಯೆಗೀಡಾ ಬಜರಂಗದಳ ಕಾರ್ಯಕರ್ತ ಹರ್ಷ ಸಹೋದರಿ 2015ರಲ್ಲಿ ಶಿವಮೊಗ್ಗದಲ್ಲಿ ಕೊಲೆಯಾಗಿದ್ದ ಮತ್ತೋರ್ವ ಹಿಂದೂ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿ ಅವರ ಮಗ ಯಶಸ್ ಓದಿನ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ. ಯಶಸ್ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ನಗರದಲ್ಲಿ ಮೃತ ವಿಶ್ವನಾಥ್ ಶೆಟ್ಟಿ ಪತ್ನಿಯ ತಾಯಿಯ ಜತೆ ಇದ್ದು, 8 ನೇ ತರಗತಿ ಓದುತ್ತಿದ್ದಾನೆ.
2015ರ ಫೆಬ್ರವರಿ 19 ರಂದು ಶಿವಮೊಗ್ಗದಲ್ಲಿ ನಡೆದ ಪಿ.ಎಫ್.ಐ ಸಮಾವೇಶ ಮುಗಿಸಿಕೊಂಡು ಹೋಗುವಾಗ ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪ ದುಷ್ಕರ್ಮಿಗಳು ವಿಶ್ವನಾಥ್ ಶೆಟ್ಟಿಯನ್ನ ಕೊಲೆ ಮಾಡಿದ್ದರು. ವಿಶ್ವನಾಥ್ ಶೆಟ್ಟಿ ಸಾವಿನ ಕೆಲ ತಿಂಗಳ ಬಳಿಕ ಪತ್ನಿ ಕೂಡ ಸಾವನ್ನಪ್ಪಿದ್ದರು. ವಿಶ್ವನಾಥ್ ಶೆಟ್ಟಿಯ ಮಗ ಯಶಸ್ ಅಪ್ಪ-ಅಮ್ಮ ಇಬ್ಬರೂ ಇಲ್ಲದೇ, ಕೊಪ್ಪ ತಾಲೂಕಿನಲ್ಲಿ ಅಜ್ಜಿಯ ಜತೆ ವಾಸವಿದ್ದಾನೆ. ಇಂದು ಅವರ ಮನೆಗೆ ಭೇಟಿ ನೀಡಿದ ಮೃತ ಹರ್ಷ ಸಹೋದರಿ ಅಶ್ವಿನಿ ಆ ಬಾಲಕನ ಓದಿನ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಅವನ ಓದಿನ ಜತೆ ಬೇರೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ನಾನೇ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ನಿಮಗೆ ಏನಾದರೂ ಬೇಕಾದರೆ ನನಗೆ ಕರೆ ಮಾಡಿ. ಅಜ್ಜಿ ಹಾಗೂ ಯಶಸ್ ಅವರ ಇಬ್ಬರ ಜವಾಬ್ದಾರಿ ನನ್ನದು ಎಂದು ಹೇಳಿದ್ದಾರೆ. ವಿಶ್ವನಾಥ್ ಶೆಟ್ಟಿ ಪತ್ನಿಯ ತಂಗಿ ಕೂಲಿ ಕೆಲಸ ಮಾಡಿಕೊಂಡು ಯಶಸ್ ಹಾಗೂ ಅಜ್ಜಿಯನ್ನ ನೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಭಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ₹25 ಲಕ್ಷದ ಚೆಕ್ ಹಸ್ತಾಂತರಿಸಿದ ಬಿಎಸ್ವೈ