ಚಿಕ್ಕಮಗಳೂರು: ಇಡೀ ದೇಶವೇ ಹರ್ ಘರ್ ತಿರಂಗಾ ಅಭಿಯಾನದ ಮೂಲಕ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯ ಖುಷಿಯಲ್ಲಿದೆ.
ದೇಶವಾಸಿ ಪ್ರತಿಯೊಬ್ಬರು ಮನೆ-ಅಂಗಡಿ-ಆಟೋ-ಬೈಕ್‍ಗಳ ಮೇಲೆ ಭಾರತದ ಬಾವುಟ ರಾರಾಜಿಸುತ್ತಿದೆ. ಆದರೆ, ಮಲೆನಾಡಿಗರು 3 ವರ್ಷದಲ್ಲಿ 36 ಸಾವಿರ ಸೈಕಲ್ ತುಳಿದು ದೇಶದ ಜನರಲ್ಲಿ ಜಾಗೃತಿ ಮೂಡಿಸುತ್ತಿರೋ ಗುಜರಾತ್ ಮೂಲದ ಮಾಜಿ ಯೋಧನ ಜೊತೆ ಹರ್ ಘರ್ ತಿರಂಗಾ ಆಚರಿಸಿ ಅವರಿಂದ ಮನೆ ಮೇಲೆ ಬಾವುಟ ಕಟ್ಟಿಸಿ ಮತ್ತಷ್ಟು ಸಂಭ್ರಮಿಸಿದ್ದಾರೆ.
ಗುಜರಾತ್ ಮೂಲದ ಬಿ.ಎಸ್.ಎಫ್. (ಬಾರ್ಡರ್ ಸೆಕ್ಯೂರಿಟ್ ಫೋರ್ಸ್) ಮಾಜಿ ಯೋಧ ಬ್ರಿಜೇಶ್ ಶರ್ಮಾ ಕಳೆದ ಮೂರು ವರ್ಷಗಳಿಂದ ಸೈಕಲ್ ಜಾಥಾ ಮಾಡುತ್ತಿದ್ದು, ಈವರೆಗೆ 36 ಸಾವಿರ ಕಿ.ಮೀ. ಸೈಕಲ್ ತುಳಿದಿದ್ದಾರೆ.
ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರಕ್ಕೆ ಭೇಟಿ ನೀಡಿದ ಅವರನ್ನು ಸಂಜಯ್ ಕೊಟ್ಟಿಗೆಹಾರ ಎಂಬುವರು ಈ ಮಾಜಿ ಯೋಧನಿಗೆ ತಮ್ಮ ಹೋಂಸ್ಟೇನಲ್ಲಿ ತಂಗಲು ಅವಕಾಶ ನೀಡಿ, ಶನಿವಾರ ಬೆಳಗ್ಗೆ ಹರ್ ಘರ್ ತಿರಂಗಾ ಅಭಿಯಾನದ ಹಿನ್ನೆಲೆ ಅವರ ಕೈಯಿಂದಲೇ ತಮ್ಮ ಮನೆ ಮೇಲೆ ಬಾವುಟ ಕಟ್ಟಿಸಿ ಆನಂದಿಸಿದ್ದಾರೆ.
ಈ ಮಾಜಿ ಯೋಧ ಬ್ರಿಜೇಶ್ ಶರ್ಮಾ, ಮೂರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ದಿನದಂದು ಸೈಕಲ್ ಜಾಥಾ ಆರಂಭಿಸಿದ್ದರು. ಮೂರು ವರ್ಷಗಳಿಂದ ಅವರು ಸೈಕಲ್ ತುಳಿಯುತ್ತಿದ್ದಾರೆ.
ಜಾಗೃತಿ ಕಾರ್ಯಕ್ರಮ: ಮಾಜಿ ಯೋಧ ಸಿಂಗಲ್ ಯೂಸ್ ಪ್ಲಾಸ್ಟಿಕ್‍ನಿಂದ ಏನೇನು ತೊಂದರೆಯಾಗಲಿದೆ ಎಂಬುದನ್ನು ಸಭೆ-ಸಮಾರಂಭ, ಶಾಲಾ-ಕಾಲೇಜಿಗೆ ಹೋಗಿ ಮಕ್ಕಳು ಹಾಗೂ ದೊಡ್ಡವರಿಗೂ ಜಾಗೃತಿ ಮೂಡಿಸುತ್ತಿದ್ದಾರೆ. ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಯನ್ನ ಸಂಪೂರ್ಣವಾಗಿ ಬಿಡಬೇಕೆಂದು ಮನವಿ ಮಾಡುತ್ತಿದ್ದಾರೆ.
ಸ್ವಚ್ಛ ಭಾರತ್ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ, ರೈತ ಈ ದೇಶದ ಬೆನ್ನೆಲುಬು ಎಂದು ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹೊಲಗದ್ದೆ-ತೋಟಗಳಲ್ಲಿ ಮಣ್ಣಿನ ಸವಕಳಿಯನ್ನು ಹೇಗೆ ತಡೆಯುವುದು ಎಂದು ರೈತರಿಗೂ ಮಾಹಿತಿ ನೀಡುತ್ತಿದ್ದಾರೆ.
ಈ ರೀತಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮೂರು ವರ್ಷಗಳಿಂದ ಸೈಕಲ್ ತುಳಿಯುತ್ತಿರೋ ಮಾಜಿ ಯೋಧನ ದೇಶಪ್ರೇಮಕ್ಕೆ ಕೊಟ್ಟಿಗೆಹಾರದ ಜನ ಕೂಡ ಫುಲ್ ಫಿದಾ ಆಗಿ ಅವರನ್ನ ಕೊಟ್ಟಿಗೆಹಾರದಲ್ಲೇ ಉಳಿಸಿಕೊಂಡು, ಸ್ನೇಹಿತನಂತೆ ಸಂತೈಸಿ ಬೀಳ್ಕೊಟ್ಟಿದ್ದಾರೆ.
ಇದನ್ನೂ ಓದಿ:ವಿಧಾನಸೌಧಕ್ಕೆ ತ್ರಿವರ್ಣ ಧ್ವಜ ಬಣ್ಣದ ಮೆರಗು... ದೀಪಾಲಂಕಾರದ ಸೊಬಗು