ಚಿಕ್ಕಮಗಳೂರು: ಆ ಯುವಕ ಕಂಡ ಕನಸು ಅಂತಿಂಥದ್ದಲ್ಲ. ಹಾಗಂತ ಕನಸು ಕಂಡು ಸುಮ್ಮನೆ ಇರಲಿಲ್ಲ. ಅದಕ್ಕೆ ತಕ್ಕಂತೆ ಪರಿಶ್ರಮ ಹಾಕುತ್ತಿದ್ದ. ಕಷ್ಟಪಟ್ಟು ವರ್ಕೌಟ್ ಮಾಡುತ್ತಿದ್ದ. ಆತ ಮುಂದೊಂದು ದಿನ ರಾಜ್ಯಕ್ಕೆ ಹೆಸರು ತರಲೇಬೇಕೆಂದು ಬೆವರು ಸುರಿಸುತ್ತಲೇ ಇದ್ದ. ಆದರೆ, ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವ ಹಾಗೆ ಕಂಡ ಕನಸು ನನಸಾಗುವಷ್ಟರಲ್ಲಿ ಮಹಾಮಾರಿ ಕೊರೊನಾ ಆತನನ್ನು ಪರೋಕ್ಷವಾಗಿ ಬಲಿ ಪಡೆದಿದ್ದು ನಿಜಕ್ಕೂ ದುರಂತ.
ಸಿನಿಮಾ ನಟರನ್ನೇ ನಾಚಿಸುವ ಕಟ್ಟುಮಸ್ತಾದ ದೇಹ, ಪರಿಪೂರ್ಣ ಸಿಕ್ಸ್ ಪ್ಯಾಕ್, ಆರೂವರೆ ಅಡಿ ಎತ್ತರ, ಈ ದೇಹವನ್ನು ನೋಡಿದವರೂ ಒಂದು ಕ್ಷಣ ವ್ಹಾವ್ ಎಂದು ಉದ್ಗಾರ ತೆಗೆಯದೇ ಸುಮ್ಮನೆ ಇರುತ್ತಿರಲಿಲ್ಲ. ಹೀಗೆ ಗಡಸು ದೇಹ ಹೊಂದಿದ್ದ ಈ ಯುವಕನ ಮನಸ್ಸು ಮಾತ್ರ ಕೋಮಲ ಮತ್ತು ಮೃದು ಸ್ವಭಾವದ್ದು.
ಹೆಸರು ಸುನೀಲ್. ಜಿಮ್ ಸುನಿ. ಮಿಸ್ಟರ್ ಕೊಪ್ಪ ಎಂದೇ ಖ್ಯಾತಿ ಪಡೆದಿದ್ದ ಹುಡುಗ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ದೂಬ್ಳ ಗ್ರಾಮದ ನಿವಾಸಿ. ಬಡತನದ ಗೆರೆಯಲ್ಲೇ ಬದುಕಿದ ಸುನೀಲ್ಗೆ ದೇಹವನ್ನು ಬಿಲ್ಡ್ ಮಾಡಬೇಕು. ಜಿಲ್ಲೆ, ರಾಜ್ಯಕ್ಕೆ ಕೀರ್ತಿ ತರುವ ಆಸೆ ಹೊಂದಿದ್ದ. ಅಂತಹ ಕನಸು ಕಂಡಿದ್ದ ಯುವಕ, ಸುಮ್ಮನೆ ಇರಲಿಲ್ಲ. ಪ್ರತಿನಿತ್ಯ 6-7 ಗಂಟೆ ಜಿಮ್ನಲ್ಲಿ ಬೆವರು ಸುರಿಸುತ್ತಿದ್ದ.
ದೂಬ್ಳ ಗ್ರಾಮದ ಪಕ್ಕದ ಜಯಪುರ ಪಟ್ಟಣದ ಜಿಮ್ವೊಂದರಲ್ಲಿ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ. ಜಿಮ್ ಸೇರುವುದಕ್ಕೂ ಮುನ್ನ ಒಂದಂಕಿ ಇದ್ದ ಗ್ರಾಹಕರು, ಸುನೀಲ್ ತರಬೇತಿದಾರನಾಗಿ ಬಂದ ತಕ್ಷಣ ಅದು ನೂರರ ಗಡಿ ಗಾಟಿತು. ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿ ಕೊರೊನಾ ಈ ಕಟುಮಸ್ತಾದ ಯುವಕನನ್ನು ಬಾಧಿಸಿತು.
ಐದು ತಿಂಗಳ ಹಿಂದೆ ಜಿಮ್ ಬಾಗಿಲು ಹಾಕಿತು. ಹೀಗಾಗಿ, ಜಿಮ್ನಲ್ಲಿ ಪಡೆಯುತ್ತಿದ್ದ ಸಂಬಳಕ್ಕೂ ಕತ್ತರಿ ಬಿದ್ದಿತ್ತು. ತನ್ನ ಗಡುಸಾದ ದೇಹವನ್ನು ಉಳಿಸಿಕೊಳ್ಳಬೇಕು ಅಂದರೆ, ದಿನಕ್ಕೆ ಹಾಲು, ಮೊಟ್ಟೆ ಸೇರಿದಂತೆ ಪೌಷ್ಠಿಕ ಆಹಾರಕ್ಕೆ ಕನಿಷ್ಠ ₹500-750 ರೂ. ಹಣ ಬೇಕಿತ್ತು. ಈ ಹಣವನ್ನಾದರೂ ಹೊಂದಿಸಿಕೊಳ್ಳಲೇಬೇಕು ಎಂದು ತೀರ್ಮಾನಿಸಿ ಎರಡು ತಿಂಗಳ ಹಿಂದೆಯಷ್ಟೇ ಆಟೋ ಖರೀದಿಸಿದ್ದ. ಆದರೆ, ಆತನ ನಿರೀಕ್ಷೆ ಹುಸಿಯಾಯಿತು.
ಯಾವಾಗ ತಾನು ಅಂದುಕೊಂಡ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ. ಕಂಡ ಕನಸು ನೆರವೇರುವುದು ಅನುಮಾನ ಎಂದುಕೊಂಡ ಸುನೀಲ್, ಜಿಮ್‍ನಲ್ಲೇ ಡೆತ್ನೋಟ್ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಬಿಟ್ಟಿದ್ದಾನೆ. ಮನೆಯಲ್ಲಿ ಅಪ್ಪ-ಅಮ್ಮನ ಜೊತೆ ತಂಗಿಗೆ ಊರುಗೋಲಾಗಿದ್ದ ಯುವಕ, ಕುಟುಂಬವನ್ನು ಸಾಕಲು ಆಗುತ್ತಿಲ್ಲ ಎಂದು ಕೆಟ್ಟ ನಿರ್ಧಾರವನ್ನು ತೆಗೆದುಕೊಂದಡಿದ್ದಾನೆ. ಮೊದಲೇ ಕಂಗಲಾಗಿದ್ದ ಕುಟುಂಬಕ್ಕೆ ಮತ್ತಷ್ಟು ಹೊಡೆತ ನೀಡಿ ಹೋಗಿದ್ದಾನೆ. ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ ಎಂದು ಡೆತ್ ನೋಟ್ನಲ್ಲಿ ಬರೆದಿದ್ದಾನೆ. ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಪೋಷಕರಿಗೆ ತಾನೂ ಹೊರೆಯಾಗಬಾರದೆಂದು ಕ್ಷಮಿಸಲಾರದ ತಪ್ಪನ್ನು ಮಾಡಿದ್ದಾನೆ. ಕಳೆದ ವರ್ಷ ಮಿಸ್ಟರ್ ಕೊಪ್ಪ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ.