ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ ದುರುಪಯೋಗ ಮಾಡಿಕೊಂಡ ಆಪಾದನೆ ಹಿನ್ನೆಲೆಯಲ್ಲಿ ತಾಲೂಕಿನ ಅಲ್ಲಂಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸೇರಿ 8 ಮಂದಿಯ ಸದಸ್ಯತ್ವ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಲ್ಲಂಪುರ ಗ್ರಾ.ಪಂ ಅಧ್ಯಕ್ಷೆ ಗಾಯತ್ರಿ, ಸದಸ್ಯರಾದ ಸಿ.ಜಿ. ಲೀಲಾ, ಬಿ.ಪಿ. ಹಾಲೇಶ್, ಬೇಬಿ, ಗೋಪಾಲಕೃಷ್ಣ, ಪ್ರದೀಪ್, ಡಿ. ರವಿ ಹಾಗೂ ಎಂ. ರಮೇಶ್ ಸದಸ್ಯತ್ವ ಕಳೆದುಕೊಂಡವರು. ಭ್ರಷ್ಟಾಚಾರದ ಆಪಾದನೆ ಹೊತ್ತ ಜನಪ್ರತಿನಿಧಿಗಳು ಸದಸ್ಯತ್ವ ರದ್ದತಿಯ ಶಿಕ್ಷೆಗೆ ಒಳಗಾದ ಅಪರೂಪದ ಪ್ರಕರಣ ಇದಾಗಿದೆ.
ತನಿಖೆಯಲ್ಲಿ ಹಣ ದುರಪಯೋಗ ಪಡಿಸಿಕೊಂಡಿರುವುದು ಸಾಬೀತಾಗಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಅನ್ವಯ, ತಕ್ಷಣದಿಂದ ಜಾರಿಗೆ ಬರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಉಪನಿರ್ದೇಶಕ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿಗಳು ಈ ಆದೇಶ ಹೊರಡಿಸಿದ್ದಾರೆ ಗ್ರಾಮ ಪಂಚಾಯತಿಯ ಪಿಡಿಒ ಲಕ್ಷ್ಮಣ ಹೇಳಿದರು.
ಪ್ರಕರಣದ ಹಿನ್ನೆಲೆ:
ಗ್ರಾ.ಪಂ.ನ ವಿವಿಧ ಯೋಜನೆಯ ಕಾಮಗಾರಿಗಳ ಬಾಬ್ತು ಅಧ್ಯಕ್ಷರೂ ಸೇರಿ ಈ ಸದಸ್ಯರಲ್ಲಿ ಮಹಿಳಾ ಸದಸ್ಯರು ತಮ್ಮ ಪತಿಯ ಹೆಸರಿಗೆ ಹಾಗೂ ಇನ್ನೂ ಕೆಲವರಿಗೆ ನೇರವಾಗಿ ತಮ್ಮ ಹೆಸರಿಗೆ ಚೆಕ್ ಪಡೆದುಕೊಂಡಿದ್ದಾರೆ. ಇದು ಅಧಿನಿಯಮ 1993ರ 43-ಎ(4) ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿದಂತಾಗಿದ್ದು, ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಒ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ವಾರ್ಡ್ನಲ್ಲಿ ಡೆಂಗ್ಯೂ ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಚರಂಡಿ ಸ್ವಚ್ಚತೆ ಮಾಡಿಸಲು ದೂರದ ಊರಿಂದ ದಿನಗೂಲಿ ಕೂಲಿಕಾರರನ್ನು ಕರೆತಂದು ಸ್ವಚ್ಚ ಮಾಡಿಸಿ ಕೈಯಿಂದಲೇ ಕೂಲಿ ನೀಡಲಾಗಿದೆ. ಬಳಿಕ ನನ್ನ ಹೆಸರಿಗೆ ಚೆಕ್ ಮೂಲಕ ಹಣ ಪಡೆದಿದ್ದೇನೆ. ನನ್ನ ಹೆಸರಿನಲ್ಲಿ ಚೆಕ್ ಪಡೆಯಬಾರದು ಎಂಬುದರ ಬಗ್ಗೆ ನನಗೆ ತಿಳಿದಿರಲಿಲ್ಲ. ಗೆದ್ದ ಹುಮ್ಮಸ್ಸಿನಲ್ಲಿ ಏನಾದ್ರೂ ಒಳ್ಳೆಯ ಕಾರ್ಯ ಮಾಡಬೇಕೆಂದಿದ್ದೇನೆಯೇ ವಿನಹ: ಅಕ್ರಮ ವ್ಯವಹಾರ ನಡೆಸಿಲ್ಲ ಎಂದು ವಜಾಗೊಂಡ ಸದಸ್ಯ ರಮೇಶ್ ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರದ ಈ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಅನರ್ಹಗೊಂಡ ಸದಸ್ಯರು ತಿಳಿಸಿದ್ದಾರೆ.
ಯಾವ್ಯಾವ ಸದಸ್ಯರಿಗೆ ಎಷ್ಟೆಷ್ಟು ಹಣ?
ಹಾಲಿ ಅಧ್ಯಕ್ಷೆ ಗಾಯತ್ರಿ ಅವರ ಪತಿ ಧ್ರುವೀಶ್ ಹೆಸರಿಗೆ ₹ 35,782, ಸದಸ್ಯೆ ಲೀಲಾ ಅವರ ಪತಿ ಪರಮೇಶ್ ಹೆಸರಿಗೆ ₹ 10,000, ಬೇಬಿ ಅವರ ಪತಿ ಕೃಷ್ಣ ಹೆಸರಿಗೆ ₹ 86,662, ಗೋಪಾಲಕೃಷ್ಣ ಹೆಸರಿಗೆ ₹ 32,556, ಪ್ರದೀಪ್ ಹೆಸರಿಗೆ ₹ 26,250, ಹಾಲೇಶ್ ಹೆಸರಿಗೆ ₹ 2,824, ರಮೇಶ್ ಹೆಸರಿಗೆ 6,192 ಹಾಗೂ ರವಿ ಹೆಸರಿಗೆ ₹ 5,400 ನೇರವಾಗಿ ತಮ್ಮ ಹೆಸರಿಗೆ ಚೆಕ್ ಮೂಲಕ ಹಣ ಪಡೆದಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.