ಚಿಕ್ಕಮಗಳೂರು : ಹುಲಿ ಯೋಜನೆ, ಬಫರ್ ಝೋನ್, ಪರಿಸರ ಸೂಕ್ಷ್ಮ ವಲಯ, ಕಸ್ತೂರಿ ರಂಗನ್ ವರದಿ ಸೇರಿದಂತೆ ವಿವಿಧ ಯೋಜನೆಗಳ ಜಾರಿ ಖಂಡಿಸಿ ಜಿಲ್ಲೆಯ ಖಾಂಡ್ಯ ಹೋಬಳಿಯ ನಾಗರಿಕರ ರಕ್ಷಣಾ ವೇದಿಕೆ ಗ್ರಾಪಂ ಚುನಾವಣೆ ಬಹಿಷ್ಕರಿಸಿದೆ. ಅಷ್ಟೇ ಅಲ್ಲ, ಗ್ರಾಪಂ ಚುನಾವಣೆಗೆ ಯಾರೂ ನಾಮಪತ್ರ ಸಲ್ಲಿಸದಂತೆ ಪಂಚಾಯತ್ ಮುಂದೆ ಕಾವಲು ಸಮಿತಿ ಕಾವಲು ಕಾಯುತ್ತಿದೆ.
ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಹೊರ ಬಿದ್ದಿರುವುದರಿಂದ ಖಾಂಡ್ಯ ಹೋಬಳಿಯ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಸರ್ವಪಕ್ಷದ ಸಭೆಯನ್ನು ಇತ್ತೀಚೆಗೆ ನಡೆಸಿ, ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯತ್ಗಳಿಂದ ಯಾವುದೇ ಪಕ್ಷ, ನಾಗರಿಕರು ಚುನಾವಣೆಗೆ ನಾಮಪತ್ರ ಸಲ್ಲಿಸದಂತೆ ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಅಕಾಲಿಕ ಮಳೆ: ಕಾಫಿ ಬೆಳೆಗಾರರು ಹೈರಾಣ
ಚುನಾವಣಾ ಬಹಿಷ್ಕಾರದ ಹಿನ್ನೆಲೆ ಉಪವಿಭಾಗಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಖಾಂಡ್ಯ ಹೋಬಳಿಗೆ ಆಗಮಿಸಿ ಬಹಿಷ್ಕಾರ ಹಿಂಪಡೆಯುವಂತೆ ಸಭೆ ನಡೆಸಿ ಮನವಿ ಮಾಡಿದ್ದರು. ಆದರೂ ಸಹ ಸಾರ್ವಜನಿಕರು ಇದಕ್ಕೆ ಒಪ್ಪದ ಕಾರಣ ಸಭೆ ವಿಫಲಗೊಂಡಿದ್ದವು.
ಈ ಹಿನ್ನೆಲೆಯಲ್ಲಿ ಖಾಂಡ್ಯ ಹೋಬಳಿಯ ದೇವದಾನ, ಕಡವಂತಿ, ಬಿದರೆ, ಹುಯಿಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ಸರ್ವಪಕ್ಷಗಳ ಸದಸ್ಯರನ್ನು ಒಳಗೊಂಡ ಕಾವಲು ಪಡೆಯನ್ನು ರಚಿಸಿ ಈ ವ್ಯಾಪ್ತಿಯಲ್ಲಿ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಂತೆ ತಡೆಯಲು ತೀರ್ಮಾನಿಸಿ ಗ್ರಾಪಂ ಮುಂಭಾಗದಲ್ಲಿ ನಿತ್ಯ ಕಾವಲು ಕಾಯಲಾಗುತ್ತಿದೆ.