ಚಿಕ್ಕಮಗಳೂರು: ರಸ್ತೆ ಪಕ್ಕದಲ್ಲಿರೋ ಮನೆ ಕಾಣವುದಿಲ್ಲ ಎಂದು ಮನೆ ಮುಂದಿದ್ದ ಸರ್ಕಾರಿ ಬಸ್ ನಿಲ್ದಾಣವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ಇಲ್ಲಿನ ಕಡೂರು ತಾಲೂಕಿನ ಎಸ್.ಬಿದಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಾಪುರ ಗ್ರಾಮದ ಬಳಿ ಅಧ್ಯಕ್ಷೆ ನೂತನವಾಗಿ ಮನೆ ನಿರ್ಮಿಸಿದ್ದು, ಮನೆಯ ಕಾಂಪೌಂಡ್ ಸೌಂದರ್ಯಕ್ಕೆ ಬಸ್ ನಿಲ್ದಾಣ ಅಡ್ಡಿಯಾಗಿದೆ ಎಂದು ಅಧ್ಯಕ್ಷೆ ಮನೆಯವರು ಸೇರಿ ನೆಲಕ್ಕುರುಳಿಸಿದ್ದಾರೆ.
ಈ ಮೂಲಕ ಅಧ್ಯಕ್ಷೆ ದ್ರಾಕ್ಷಾಯಣಮ್ಮ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯರು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೆ ನಮ್ಮ ಮನೆಗೆ ದಾರಿ ಇರಲಿಲ್ಲ, ಸಾಲದಕ್ಕೆ ರಸ್ತೆ ಪಕ್ಕದ ಮನೆಗೆ ಬಸ್ ನಿಲ್ದಾಣ ಅಡ್ಡವಾಗಿದೆ ಎಂದೂ ದ್ರಾಕ್ಷಾಯಣಮ್ಮ ಹಾಗೂ ಅವರ ಮಕ್ಕಳಾದ ಪ್ರಭಾಕರ್ ಹಾಗೂ ಜಗದೀಶ್ ಜೆಸಿಬಿ ಹಾಗೂ ಟ್ರ್ಯಾಕ್ಟರ್ ತಂದು ಬಸ್ ನಿಲ್ದಾಣವನ್ನ ನೆಲ ಸಮಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಿದ್ಧಾಪುರ ಗ್ರಾಮದ ಜನರು ಅಧ್ಯಕ್ಷರ ವಿರುದ್ಧ ತಿರುಗಿ ಬಿದ್ದಿದ್ದು ದ್ರಾಕ್ಷಾಯಣಮ್ಮ ಅವರ ಸದಸ್ಯತ್ವವನ್ನ ರದ್ದು ಮಾಡಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ, ಜಿಲ್ಲಾಧಿಕಾರಿಗೆ ದೂರು ನೀಡಿ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.