ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಕಡೂರು ತಾಲೂಕಿನ ಜಿ.ಕೆ. ಗಿರೀಶ್ ಉಪ್ಪಾರ್ ನೇಮಕ ವಿರುದ್ಧ ಅಪಸ್ವರ ಕೇಳಿಬಂದಿದೆ.
ಈ ಹಿನ್ನೆಲೆ ಕಡೂರು ಮಂಡಲದ ಎಲ್ಲಾ ಪದಾಧಿಕಾರಿಗಳು ಅವರು ಆಯ್ಕೆಯನ್ನು ವಿರೋಧಿಸಿ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಕಡೂರು ತಾಲೂಕಿನ ಜಿ.ಕೆ. ಗಿರೀಶ್ ಉಪ್ಪಾರ್ ಅವರನ್ನು ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷರನ್ನಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇಮಿಸಿ ಆದೇಶ ಹೊರಡಿಸಿರುವ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿ ಮಂಡಲದ ಎಲ್ಲಾ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾಧ್ಯಕ್ಷ ಹೆಚ್ ಸಿ ಕಲ್ಮುರುಡಪ್ಪ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಜಿ.ಕೆ. ಗಿರೀಶ್ ಉಪ್ಪಾರ್ ಅವರು ಕಳೆದ 2018ರ ವಿಧಾನ ಸಭೆ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಅವರನ್ನು ಆ ಸಮಯದಲ್ಲಿ ಪಕ್ಷದಿಂದ ಉಚ್ಛಾಟನೆ ಸಹ ಮಾಡಲಾಗಿತ್ತು. 2019ರಲ್ಲಿ ನಡೆದ ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಸದಸ್ಯತ್ವ ಪಡೆಯದ ಅವರನ್ನು ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಹಾಗೂ ಪಕ್ಷದ ಅಧ್ಯಕ್ಷರ ಗಮನಕ್ಕೆ ತರದೇ ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಕಡೂರು ತಾಲೂಕು ಬಿಜೆಪಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಚಗಳ ಅಧ್ಯಕ್ಷರು ಕಡೂರು ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಕಡೂರು ಬೀರೂರು ಪುರಸಭೆಯ ಚುನಾಯಿತ ಸದಸ್ಯರು ರಾಜೀನಾಮೆ ನೀಡಲಿದ್ದಾರೆ ಎಂದು ಕಡೂರು ಬಿಜೆಪಿ ಮಂಡಲ ಅಧ್ಯಕ್ಷ ದೇವಾನಂದ್ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.