ಚಿಕ್ಕಮಗಳೂರು: ಇಲ್ಲಿನ ಬಾಬಾ ಬುಡನ್ಗಿರಿ ದರ್ಗಾ ಶಾಖಾದ್ರಿ ಅವರ ಮನೆ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿ ತಲಾ ಒಂದು ಚಿರತೆ ಹಾಗೂ ಜಿಂಕೆ ಚರ್ಮ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ಎಸಿಎಫ್ ಮೋಹನ್ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿನ ಶಾಖಾದ್ರಿ ಗೌಸ್ ಮೋಯಿದ್ದೀನ್ ಅವರ ಮನೆಯಲ್ಲಿ ಅಧಿಕಾರಿಗಳು ಶುಕ್ರವಾರ ಪರಿಶೀಲನೆ ಕೈಗೊಂಡಿದ್ದರು. ಆದರೆ, ಈ ವೇಳೆ ಶಾಖಾದ್ರಿ ಮನೆಯಲ್ಲಿ ಇರಲಿಲ್ಲ. ಮನೆಯ ಬಾಗಿಲು ಲಾಕ್ ಆಗಿದ್ದ ಕಾರಣ 10 ಗಂಟೆಗೂ ಅಧಿಕ ಕಾಲ ಕಾದು ಕುಳಿತ ಅಧಿಕಾರಿಗಳು ಸಂಬಂಧಿಕರೊಬ್ಬರ ಮೂಲಕ ಮನೆಯ ಕೀ ತರಿಸಿಕೊಂಡಿದ್ದರು. ಬೆಂಗಳೂರಿನಿಂದ ಬಂದ ಬಸ್ನಲ್ಲಿ ಕೀ ತರಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ವನ್ಯಜೀವಿ (ರಕ್ಷಣೆ) ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ.
ಮನೆಯ ಕೀ ಬಂದ ಬಳಿಕ ಶಾಖಾದ್ರಿ ಅನುಪಸ್ಥಿತಿಯಲ್ಲಿ, ಅವರ ಸಂಬಂಧಿಕರ ಸಮ್ಮುಖದಲ್ಲಿ ಮನೆ ತಪಾಸಣೆ ನಡೆಸಲಾಗಿದೆ. ಈ ವೇಳೆ ಮನೆಯಲ್ಲಿ ಒಂದು ಚಿರತೆ ಹಾಗೂ ಒಂದು ಜಿಂಕೆ ಚರ್ಮ ಪತ್ತೆಯಾಗಿದೆ. ಎರಡು ಪ್ರಾಣಿಯ ಚರ್ಮವನ್ನು ವಶಕ್ಕೆ ಪಡೆದಿದ್ದು, ಎಫ್.ಎಸ್.ಎಲ್. ವರದಿಗೆ ಚರ್ಮವನ್ನು ಕಳುಹಿಸಲಾಗುವುದು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡುತ್ತೇವೆ. ಬಳಿಕ ಮುಂದಿನ ತನಿಖೆ ಕೈಗೊಳ್ಳಲಾಗುವುದು. ಅವರ ಮನೆಯಲ್ಲಿ ಯಾವುದೇ ರೀತಿಯ ಹುಲಿ ಚರ್ಮ ದೊರಕಿಲ್ಲ ಎಂದು ಎಸಿಎಫ್ ಮೋಹನ್ ತಿಳಿಸಿದ್ದಾರೆ.
ಚಿಕ್ಕಮಗಳೂರು ಆರ್ಎಫ್ಒ ಮೋಹನ್ ಅವರ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆದಿದೆ. ಎಲ್ಲದರ ಬಗ್ಗೆ ನಾವು ವಿಚಾರಣೆ ಮಾಡುತ್ತೇವೆ ಎಂದು ಅಧಿಕಾರಿ ತಿಳಿಸಿದರು.
ಇದನ್ನೂ ಓದಿ: ಲಕ್ಷ್ಮಣ್ ಸವದಿ ನಿವಾಸದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಶೋಧ; ಹುಲಿ ಉಗುರು ಮಾದರಿಯ ಪೆಂಡೆಂಟ್ ವಶಕ್ಕೆ