ಚಿಕ್ಕಮಗಳೂರು: ಆನೆ ದಾಳಿಯನ್ನು ನಿಯಂತ್ರಿಸಲಾಗದ ಅರಣ್ಯ ಇಲಾಖೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿ ಕಳ್ಳ ಬೇಟೆ ನಿಗ್ರಹ ಶಿಬಿರವನ್ನು ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.
ಕೈಗೆ ಸಿಕ್ಕ, ಸಿಕ್ಕ ವಸ್ತುಗಳನ್ನೆಲ್ಲ ಆಕ್ರೋಶಿತರು ಪುಡಿ ಪುಡಿ ಮಾಡಿದ್ದು, ಆನೆ ದಾಳಿಯನ್ನ ನಿಯಂತ್ರಿಸಲಾಗದ ಅರಣ್ಯ ಇಲಾಖೆ ವಿರುದ್ಧ ರೋಷಾವೇಶ ತೋರಿಸಿದ್ದಾರೆ. ನಿಮಗೆ ಪಟಾಕಿ ಕೊಡುವ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಆನೆ ನಿಯಂತ್ರಿಸಕ್ಕೆ ಆಗಲ್ಲ, ತಿನ್ನೋಕೆ ಸೋನಾ ಮುಸುರಿ ಅಕ್ಕಿ ಬೇಕು ಎಂದು ಕಿಡಿಕಾರಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು, ಮುಖ ತೋರಿಸಿ.. ತೋರಿಸಿ ಎಂದು ಯುವಕರು ಕಿರುಚಾಡಿದ್ದಾರೆ. ನಿರಂತರ ಆನೆ ದಾಳಿಯಿಂದ ಮಲೆನಾಡು ಭಾಗದ ಜನರು ಕಂಗೆಟ್ಟಿದ್ದು, ನಾಲ್ಕು ದಿನದ ಹಿಂದೆ ಆನೆ ದಾಳಿಗೆ 35 ವರ್ಷದ ಮಹಿಳೆ ಸಾವನ್ನಪ್ಪಿದ್ದರು. ಆದರೂ ಅರಣ್ಯ ಇಲಾಖೆ ಯಾವುದೇ ರೀತಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.