ಚಿಕ್ಕಮಗಳೂರು : ಕಳೆದ 2019ರಲ್ಲಿ ಸುರಿದ ರಣಮಳೆಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ ಮತ್ತು ಮದುಗುಂಡಿ ಗ್ರಾಮಗಳಲ್ಲಿ ಭೂಕುಸಿತ ಉಂಟಾಗಿ ಕೆಲವರು ಮನೆ, ಜಮೀನುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಈ ಘಟನೆ ನಡೆದು ನಾಲ್ಕು ವರ್ಷಗಳು ಕಳೆದರೂ ಮಳೆ ಹಾನಿ ಸಂತ್ರಸ್ತರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
2019ರ ಆಗಸ್ಟ್ 9 ಮತ್ತು 10ರಂದು ಮಲೆನಾಡಿನಲ್ಲಿ ಧಾರಾಕಾರ ಮಳೆಯಾಗಿತ್ತು. ಎರಡು ದಿನ ಸುರಿದ ವರ್ಷಧಾರೆಗೆ ಗ್ರಾಮಕ್ಕೆ ಗ್ರಾಮವೇ ಕೊಚ್ಚಿ ಹೋಗಿತ್ತು. ಬೆಟ್ಟ-ಗುಡ್ಡಗಳು ಕುಸಿದಿದ್ದವು. ಪ್ರಾಣ ಉಳಿಸಿಕೊಳ್ಳಲು ಉಟ್ಟ ಬಟ್ಟೆಯಲ್ಲಿ ಇಲ್ಲಿನ ಜನ ಓಡಿ ಬಂದಿದ್ದರು. ಮಾಜಿ ಸಿಎಂ ಯಡಿಯೂರಪ್ಪ, ಸಿ.ಟಿ.ರವಿ, ಆರ್.ಅಶೋಕ್, ಮಾಧುಸ್ವಾಮಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಸಂತ್ರಸ್ತರಿಗೆ ಸೂಕ್ತ ಪರಿಹಾರದ ಭರವಸೆ ನೀಡಿದ್ದರು. ಆದರೆ ನಾಲ್ಕು ವರ್ಷ ಕಳೆದರೂ ಪರಿಹಾರ ಮರೀಚಿಕೆಯಾಗಿದೆ.
ಮಳೆಯ ಅಬ್ಬರಕ್ಕೆ ಮಲೆಮನೆ ಗ್ರಾಮದ 6 ಮನೆ, ಎರಡು ದೇವಸ್ಥಾನ ಹಾಗೂ ಅಂದಾಜು 40 ಎಕರೆ ಜಮೀನು ಕೊಚ್ಚಿ ಹೋಗಿತ್ತು. ಗುಡ್ಡಗಳು ಕುಸಿದ ಪರಿಣಾಮ ಜನರು ಮನೆ ಮತ್ತು ಜಮೀನುಗಳನ್ನು ಕಳೆದುಕೊಂಡಿದ್ದರು. ಸಂತ್ರಸ್ತರಿಗೆ ನೆರವಿನ ಭರವಸೆ ನೀಡಿದ ಸರ್ಕಾರ ಬಾಡಿಗೆ ಮನೆಯಲ್ಲಿರುವಂತೆ ಸೂಚಿಸಿತ್ತು. ಮನೆಯ ಬಾಡಿಗೆಯನ್ನೂ ಪಾವತಿಸುವುದಾಗಿ ಹೇಳಿತ್ತು. ಅಲ್ಲದೇ ಒಂದು ವರ್ಷದೊಳಗೆ ಮನೆ, ಜಮೀನು ನೀಡುವುದಾಗಿ ಹೇಳಿದ್ದರು. ಆದರೆ ಸರ್ಕಾರ ಬಾಡಿಗೆ ಹಣವನ್ನೂ ನಿರಾಶ್ರಿತರಿಗೆ ನೀಡಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರವಾಹ ಸಂತ್ರಸ್ತೆ ಸಾಂಕಿತಾ, "2019ರಲ್ಲಿ ಸುರಿದ ಭಾರಿ ಮಳೆಗೆ ಮನೆ ಕಳೆದುಕೊಂಡು ಇಂದಿಗೆ ನಾಲ್ಕು ವರ್ಷ ಕಳೆದಿದೆ. ಅಂದು ಸರ್ಕಾರದವರು ನೀವು ಬಾಡಿಗೆ ಮನೆಯಲ್ಲಿರಿ. ನಾವು ಬಾಡಿಗೆ ನೀಡುವುದಾಗಿ ಹೇಳಿದ್ದರು. ಆದರೆ ಈ ತನಕ ಯಾವುದೇ ಹಣವನ್ನು ನೀಡಿಲ್ಲ. ಇದರಿಂದ ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಇನ್ನು ಜಾಗ ಕೊಡುವುದಾಗಿ ಹೇಳಿದ್ದರು. ಜಾಗದ ವ್ಯವಸ್ಥೆಯನ್ನು ಮಾಡಿಕೊಡಲಿಲ್ಲ. ಈ ಸಂಬಂಧ ನಾವು ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದೆವು. ಈಗ ಸರ್ಕಾರಕ್ಕೆ ಮನವಿ ಮಾಡುವುದೇನೆಂದರೆ ನಮಗೊಂದು ಜಾಗ ನೀಡಿ ಮನೆ ಕಟ್ಟಿಕೊಳ್ಳಲು ಅವಕಾಶ ಕೊಡಿ" ಎಂದು ಹೇಳಿದರು.
ಮನೆ ಕಳೆದುಕೊಂಡ ರಾಜಣ್ಣ ಮಾತನಾಡಿ, "2019ರಲ್ಲಿ ಸುರಿದ ಭಾರಿ ಮಳೆಗ ಭೂ ಕುಸಿತ ಉಂಟಾಗಿ ಮಲೆಮನೆ ಐದು ಕುಟುಂಬಗಳು ನಿರಾಶ್ರಿತರಾಗಿದ್ದೆವು. ಇಲ್ಲಿಗೆ ಭೇಟಿ ನೀಡಿದ್ದ ಸಿಎಂ ಮತ್ತು ಸಚಿವರೆಲ್ಲ ಪುನರ್ವಸತಿ ಕಲ್ಪಿಸುವ ಭರವಸೆ ನೀಡಿದ್ದರು. ಬಳಿಕ ಒಂದು ತಿಂಗಳು ನಿರಾಶ್ರಿತ ಶಿಬಿರದಲ್ಲಿರಿಸಿ ಬಳಿಕ ನಮ್ಮನ್ನು ಬಾಡಿಗೆ ಮನೆಯಲ್ಲಿ ಇರುವಂತೆ ಸೂಚಿಸಿದ್ದರು. ಜೊತೆಗೆ ಬಾಡಿಗೆ ನೀಡುವುದಾಗಿ ಹೇಳಿದ್ದರು. ಘಟನೆ ನಡೆದು ನಾಲ್ಕು ವರ್ಷ ಕಳೆದರೂ ಇನ್ನೂ ಯಾವುದೇ ಪುನರ್ವಸತಿ ಕಲ್ಪಿಸಿಲ್ಲ. ಈ ಕೂಡಲೇ ಸರ್ಕಾರ ನಮಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
ನಿರಾಶ್ರಿತರು ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಸೇರಿದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಪರಿಹಾರ ಸಿಗದೇ ಬೇಸತ್ತ ನಿರಾಶ್ರಿತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ವಿಷ ಕುಡಿದು ಆತ್ಮಹತ್ಯೆಗೂ ಯತ್ನಿಸಿದ್ದರು. ಸದ್ಯ ಜಿಲ್ಲಾಡಳಿತ ನಿರಾಶ್ರಿತ ಮಲೆಮನೆ ಗ್ರಾಮಸ್ಥರಿಗೆ ಬೈರಾಪುರ ಗ್ರಾಮದಲ್ಲಿ ಜಾಗ ಗುರುತು ಮಾಡಿದೆ. ಆದರೆ ಇಲ್ಲಿನ ವಾರ್ಷಿಕ 250-300 ಇಂಚು ಮಳೆಯಾಗುವ ಕಾರಣ ಮತ್ತು ಕಾಡುಪ್ರಾಣಿಗಳ ಹಾವಳಿ ಇರುವುದರಿಂದ ಇಲ್ಲಿ ಇಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ : Gruhalakshmi Scheme: ರಾಜ್ಯಾದ್ಯಂತ ಆಗಸ್ಟ್ 27ರಂದು ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ : ಡಿಸಿಎಂ ಡಿಕೆ ಶಿವಕುಮಾರ್