ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕು ಮಲೆ ಮನೆ ಗ್ರಾಮದಲ್ಲಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ನೆರೆ ಪೀಡಿತ ಪ್ರದೇಶ ವೀಕ್ಷಣೆ ಮಾಡುವ ವೇಳೆ ಮೇಗೂರು ಗ್ರಾಮದ ಜಯಂತ್ ಎಂಬ ವ್ಯಕ್ತಿ ಸಿಎಂ ಎದುರು ಕಣ್ಣೀರು ಹಾಕಿದ ಘಟನೆ ನಡೆಯಿತು.
ನಮ್ಮ ಊರಿನಲ್ಲಿ 12 ಮನೆಗಳು ಜಲಾವೃತ ಆಗಿದೆ, ಇಲ್ಲಿಯವರೆಗೂ ಯಾರು ಅಲ್ಲಿಗೆ ಭೇಟಿ ನೀಡಿಲ್ಲ. ಯಾವ ಅಧಿಕಾರಿಗಳು ಬಂದಿಲ್ಲ, ಯಾರು ನೆರವು ನೀಡಿಲ್ಲ. ನಮಗೆ ಇರಲು ಮನೆ, ರಸ್ತೆಗಳು ಯಾವುದೂ ಇಲ್ಲ. ಸಂಪೂರ್ಣ ನಿರ್ಗತಿಕರಾಗಿದ್ದೇವೆ. ಎಲ್ಲರೂ ಮಲೆ ಮನೆ ಗ್ರಾಮಕ್ಕೆ ಬರುತ್ತಾರೆ ಆದರೆ ಯಾರೂ ಕೂಡ ಮೇಗೂರು ಗ್ರಾಮಕ್ಕೆ ಬಂದಿಲ್ಲ ನಮ್ಮ ಉರಿಗೂ ಬನ್ನಿ ಎಂದು ಮುಖ್ಯಮಂತ್ರಿ ಎದುರು ಕಣ್ಣೀರು ಹಾಕಿದ್ದಾರೆ.
ಈ ವೇಳೆ ಮುಖ್ಯಮಂತ್ರಿ ಸಂತ್ರಸ್ತನ ಮನವಿ ಸ್ವೀಕರಿಸಿದರು. ಮನವಿ ಸಲ್ಲಿಸಿ ಬಳಿಕ ಜಯಂತ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಯಾವುದೇ ಉತ್ತರ ನೀಡಿಲ್ಲ. ನಾವು ನಿರಾಶ್ರಿತರ ಕೇಂದ್ರಕ್ಕೆ ಹೋಗಲು ಆಗುತ್ತಿಲ್ಲ. ಊರಿಂದ ಬರಲೂ ರಸ್ತೆಯೂ ಇಲ್ಲ. ನಮ್ಮ ಊರಿನಲ್ಲಿ ಕಾಡುಪ್ರಾಣಿಗಳ ಕಾಟವಿದೆ, ದಯಮಾಡಿ ನಮ್ಮನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಅಳಲು ತೊಡಿಕೊಂಡರು.