ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ ಓರ್ವ ವೈದ್ಯರಲ್ಲಿ ಕೊರೊನಾ ವೈರಸ್ ಕಂಡುಬಂದಿದೆ. ತರೀಕೆರೆ ತಾಲೂಕಿನಲ್ಲಿ ಗರ್ಭಿಣಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸಂಜೆ ಎನ್.ಆರ್ ಪುರ ತಾಲೂಕಿನಲ್ಲಿ ಒಂದೇ ಕುಟುಂಬದ ಮೂರು ಜನರಲ್ಲಿ ವೈರಾಣು ಪತ್ತೆಯಾಗಿದೆ. 7 ವರ್ಷದ ಹುಡುಗ, 10 ವರ್ಷದ ಬಾಲಕ, 17 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿದೆ. ಎಲ್ಲರೂ ಕೆಲ ದಿನಗಳ ಹಿಂದೆ ಮುಂಬೈನಿಂದ ಎನ್.ಆರ್ ಪುರ ತಾಲೂಕಿಗೆ ಬಂದಿದ್ದರು.
ಕೊರೊನಾ ಸೋಂಕು ಪತ್ತೆಯಾದ ವ್ಯಕ್ತಿಗಳ ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಂಗ್ರಹಿಸುತ್ತಿದೆ. ಒಬ್ಬೊಬ್ಬರ ಟ್ರಾವೆಲ್ ಹಿಸ್ಟರಿಯೂ ಭಯ ಹುಟ್ಟಿಸುತ್ತಿದೆ. ಈ ವ್ಯಕ್ತಿಗಳ ಅಕ್ಕಪಕ್ಕದ ಮನೆಯವರು, ಆಪ್ತ ವಲಯದಲ್ಲಿ ಭೀತಿ ಹೆಚ್ಚಾಗಿದ್ದು, ಈಗಾಗಲೇ ಅನೇಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಇವರ ಗಂಟಲು ದ್ರವ, ರಕ್ತದ ಮಾದರಿಯನ್ನು ಹಾಸನದ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಪರೀಕ್ಷೆ ವೇಳೆ ಕೊರೊನಾ ಸೋಂಕು ತಗುಲಿರುವುದು ತಿಳಿದು ಬಂದಿದೆ. ಸೋಂಕಿತರು ವಾಸವಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಇಲ್ಲಿ ಸಾರ್ವಜನಿಕರು ಸಂಚರಿಸದಂತೆ ಜಿಲ್ಲಾಡಳಿತ ಎಚ್ಚರವಹಿಸಿದೆ.
ಸೋಂಕಿತ ವ್ಯಕ್ತಿಗಳ ಜೊತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಜನರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.