ಚಿಕ್ಕಮಗಳೂರು : ಜಿಲ್ಲೆಯ ಮಾಗುಂಡಿ ಸಮೀಪವಿರುವ ಭದ್ರಾ ನದಿಯಲ್ಲಿ ಮುಳುಗಿ ತಂದೆ-ಮಗ ಇಬ್ಬರೂ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಮೃತರನ್ನು ಮೂಡಿಗೆರೆ ಸಮೀಪದ ಹಂಡುಗುಳಿ ಗ್ರಾಮದ ಲೋಕೇಶ್(40 ವರ್ಷ) ಮತ್ತು ಅವರ ಮಗ ಸಾತ್ವಿಕ್(13 ವರ್ಷ) ಎಂದು ಗುರುತಿಸಲಾಗಿದೆ. ಮಾಗುಂಡಿ ಸಮೀಪದ ಹುಯ್ಗೆರೆ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮನೆಗೆ ಸುಗ್ಗಿ ಹಬ್ಬಕ್ಕೆಂದು ಲೋಕೇಶ್ ತನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ತೆರಳಿದ್ದರು.
ಈ ಸಂದರ್ಭದಲ್ಲಿ ಮನೆಯ ಸಮೀಪದಲ್ಲೇ ಹರಿಯುತ್ತಿರುವ ಭದ್ರಾ ನದಿಯ ಬಳಿಗೆ ನಿನ್ನೆ ಸಂಜೆ ಸಂಬಂಧಿಕರೊಂದಿಗೆ ತೆರಳಿದ್ದಾರೆ. ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ನದಿಯ ಬಂಡೆಯೊಂದರ ಮೇಲೆ ನಿಂತಿದ್ದ ಸಾತ್ವಿಕ್ ಕಾಲು ಜಾರಿ ನೀರಿಗೆ ಬಿದ್ದಿದ್ದು, ಮಗನನ್ನು ರಕ್ಷಿಸಲು ಲೋಕೇಶ್ ಸಹ ನದಿಗೆ ಹಾರಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರೂ ಮುಳುಗಿ ಸಾವನ್ನಪ್ಪಿದ್ದು, ಇಬ್ಬರಿಗೂ ಈಜು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದವರನ್ನು ರಕ್ಷಿಸಲು ಸಂಬಂಧಿಕರು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಕುಟುಂಬದಸ್ಥರ ಕಣ್ಣೆದುರೇ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ನದಿಯಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಇದನ್ನೂ ಓದಿ : ಗಂಡನಿಗೆ ಕರೆ ಮಾಡಿ ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ಮಹಿಳೆ