ಚಿಕ್ಕಮಗಳೂರು: ಅದೊಂದು ಮಹತ್ವಾಕಾಂಕ್ಷೆ ನೀರಾವರಿ ಯೋಜನೆ. ಆ ಯೋಜನೆಗೆ ಎಂದು ಕಾಲುವೆ ತೆಗೆದು ದಶಕವೇ ಕಳೆದಿದೆ. 10 ವರ್ಷದಿಂದ ಪರಿಹಾರ, ನೀರು, ಬದಲಿ ಭೂಮಿ ಯಾವುದೂ ಇಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಬೇಡಿಕೊಂಡರೂ ಪ್ರಯೋಜನವಿಲ್ಲ. ನೊಂದ ರೈತರು ರಾಷ್ಟ್ರಪತಿಗೆ ಪತ್ರ ಬರೆದು ದಯಾಮರಣಕ್ಕೆ ಬೇಡಿಕೊಂಡಿದ್ದಾರೆ. ರಾಷ್ಟ್ರಪತಿ ಸರ್ಕಾರ, ಜಿಲ್ಲಾಡಳಿತಕ್ಕೆ ಪತ್ರ ಬರೆದರೂ ಆ ಲೆಟರ್ಗೆ ಬೆಲೆ ಇಲ್ಲ. ರಾಷ್ಟ್ರಪತಿಗೆ ಲೆಟರ್ ಬರೆದಿದ್ದೀರಾ? ಅವರ ಬಳಿಯೇ ಹೋಗಿ ಅಂತಾರಂತೆ ಅಧಿಕಾರಿಗಳು. ಅದಕ್ಕೆ ಆ ರೈತರು ಮತ್ತೆ ದಯಾಮರಣ ಕೇಳಿ ಪತ್ರ ಬರೆಯಲು ಮುಂದಾಗಿದ್ದಾರೆ.
ಪಾಳು ಬಿದ್ದಿರುವ ಪಂಪ್ ಹೌಸ್. ತುಕ್ಕು ಹಿಡಿಯುತ್ತಿರುವ ಎಲೆಕ್ಟ್ರಿಕ್ ಐಟಂಗಳು. ಪೈಪ್ ಒಡೆದು ಹೊರ ಹೋಗುತ್ತಿರುವ ನೀರು. ಇದೆಲ್ಲ ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಮಳಲೂರು ಏತ ನೀರಾವರಿ ಯೋಜನೆಯ ದೃಶ್ಯ. ಚಿಕ್ಕಮಗಳೂರಿನ ಮಳಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳಿಗೆ ನೀರನ್ನು ಒದಗಿಸೋ ಮಹತ್ವಾಕಾಂಕ್ಷೆ ಯೋಜನೆ ಇದು. 1998 ರಲ್ಲಿ ಈ ಯೋಜನೆಗೆ ಚಾಲನೆ ಸಿಕ್ತು. ಸುಮಾರು 1480 ಎಕರೆ ಪ್ರದೇಶಕ್ಕೆ ನೀರನ್ನು ಒದಗಿಸುವ ಯೋಜನೆ.
ಮೊದಲ ಹಂತದಲ್ಲಿ ಜಾಕ್‍ವೆಲ್, ಇಂಟೆಕ್‍ವೆಲ್, ಪೈಪ್‍ಗಳ ಅಳವಡಿಸಿದರು. 2ನೇ ಹಂತದಲ್ಲಿ ಪಂಪ್ ಅಳವಡಿಕೆ, ವಿದ್ಯುತ್ ಕಾಮಗಾರಿ ಕೂಡ ನಡೆದಿದೆ. ಈ ಯೋಜನೆಗಾಗಿ ಇಲ್ಲಿನ ರೈತರು ಕೃಷಿ ಭೂಮಿಯನ್ನೂ ನೀಡಿದ್ದಾರೆ. ಆದರೆ, ಬಹುತೇಕ ರೈತರಿಗೆ ಸರ್ಕಾರದಿಂದ ಪರಿಹಾರ ಬಂದಿಲ್ಲ. ಯೋಜನೆಗಾಗಿ ಮಳಲೂರು, ಕಂಬಿಹಳ್ಳಿ, ತಡರೂರು, ಕದ್ರಿಮಿದ್ರಿ ಗ್ರಾಮದ 19 ಎಕರೆ ಭೂಮಿಯನ್ನ ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿದೆ. ಆದರೆ, ಸರ್ಕಾರ ಬಹುತೇಕ ರೈತರಿಗೆ ಭೂಮಿ ನೀಡಿದ್ರು ಪರಿಹಾರ ನೀಡಿಲ್ಲ. ಪರಿಹಾರಕ್ಕಾಗಿ ರೈತರು ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸಿದ್ದಾರೆ ವಿನಃ ಪರಿಹಾರ ಮಾತ್ರ ಬರಲಿಲ್ಲ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜಾವಾಬ್ದಾರಿಗೆ ನೊಂದ ರೈತರು ದಯಾಮರಣ ಕೋರಿ ರಾಷ್ಟ್ರಪತಿಗೂ ಪತ್ರ ಬರೆದಿದ್ದಾರೆ. ರಾಷ್ಟ್ರಪತಿ ಕಚೇರಿಯಿಂದ ಸರ್ಕಾರಕ್ಕೆ ಪತ್ರ ಬಂದಿದೆ. ಸರ್ಕಾರದಿಂದ ಜಿಲ್ಲಾಡಳಿತಕ್ಕೂ ಲೆಟರ್ ಬಂದಿದೆ. ಆದರೆ, ಆ ಲೆಟರ್ಗೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ ಎಂದು ರೈತರು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಜಮೀನು ಕಳೆದುಕೊಂಡು ನಿರ್ಗತಿಕರಾದ ರೈತರು.. ಅಧಿಕಾರಿಗಳಿಗೆ ಹೋಗಿ ಕೇಳಿದ್ರೆ ರಾಷ್ಟ್ರಪತಿಗೆ ಪತ್ರ ಬರೆದಿದ್ದೀರಾ. ಹೋಗಿ ಅಲ್ಲಿಗೆ ಹೋಗಿ, ಅವರ ಬಳಿಯೇ ಕೆಲಸ ಮಾಡಿಸಿಕೊಳ್ಳಿ ಅಂತಾರಂತೆ. ಇದೀಗ ರೈತರು, ಮತ್ತೆ ರಾಷ್ಟ್ರಪತಿಗೆ ಪತ್ರ ಬರೆದು ನ್ಯಾಯ ಕೊಡಿಸಿ ಇಲ್ಲ ದಯಾಮರಣಕ್ಕೆ ಅನುಮತಿ ನೀಡಿ ಎಂದು ಬೇಡಿಕೊಳ್ಳಲು ಮುಂದಾಗಿದ್ದಾರೆ. ಈ ಯೋಜನೆಯಿಂದ ಜಮೀನು ಕಳೆದುಕೊಂಡ ರೈತರು ಇಂದು ನಿರ್ಗತಿಕರಾಗಿದ್ದಾರೆ. ಮಕ್ಕಳನ್ನ ಓದಿಸೋಕೆ ಆಗದಂತಹಾ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಭೂಮಿಗೆ ನಮಗೆ ಪರಿಹಾರ ಕೊಡಿ, ನಮ್ಮ ಬದುಕು ನಾವು ನೋಡಿಕೊಳ್ಳುತ್ತೇವೆ ಅಂದ್ರೆ ಸರ್ಕಾರ ಪರಿಹಾರ ನೀಡದ ಕಾರಣ ರೈತರು ಮತ್ತೆ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆಯಲು ಮುಂದಾಗಿದ್ದಾರೆ.
ಪ್ರತಿಭಟನೆ ಮಾಡಿದ್ರೂ ಉಪಯೋಗವಿಲ್ಲ.. ಒಟ್ಟಾರೆ, ನೀರು ಬರುತ್ತೆ ಅಂತ ಜನ ಜಮೀನು ನೀಡಿದ್ರು. ದಶಕಗಳೇ ಕಳೆದ್ರು ನೀರು ಬರಲಿಲ್ಲ. ಕಾಮಗಾರಿಯೂ ಪೂರ್ಣವಾಗಲಿಲ್ಲ, ಜಮೀನು ಕೊಟ್ಟ ಕೆಲವರಿಗೆ ಪರಿಹಾರವೂ ಇಲ್ಲ. ಇರುವ ಅಲ್ಪ ಭೂಮಿಯಲ್ಲಿ ಬೆಳೆ ಬೆಳೆಯೋಕು ಸಾಧ್ಯವಾಗ್ತಿಲ್ಲ. ದಶಕಗಳಿಂದ ನೊಂದ ರೈತರು ಸರ್ಕಾರ ಕೂಡಲೇ ಏತ ನೀರಾವರಿ ಯೋಜನೆಯನ್ನ ಪೂರ್ಣಗೊಳಿಸಿ ರೈತರಿಗೆ ಉಳಿದ ಪರಿಹಾರ ನೀಡುವಂತೆ ಧರಣಿ ಪ್ರತಿಭಟನೆ ಮಾಡಿದ್ರೂ ಉಪಯೋಗವಿಲ್ಲ. ದಯಾ ಮರಣಕ್ಕೆ ರಾಷ್ಟ್ರಪತಿಗೆ ಮತ್ತೆ-ಮತ್ತೆ ಪತ್ರ ಬರೆಯುತ್ತಿದ್ದಾರೆ. ಅಧಿಕಾರಿಗಳು ಇನ್ನಾದ್ರು ಪರಿಹಾರ ನೀಡಿ, ಬದುಕು ಕಟ್ಟಿಕೊಡ್ತಾರಾ ಕಾದುನೋಡ್ಬೇಕು.
ಓದಿ: 11 ಮಕ್ಕಳಿದ್ದರೂ ತುತ್ತು ಅನ್ನಕ್ಕೆ ವೃದ್ಧೆ ಪರದಾಟ.. ದಯಾಮರಣ ಕೋರಿ ಹಾವೇರಿ ಜಿಲ್ಲಾಧಿಕಾರಿಗೆ ಅರ್ಜಿ