ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಭದ್ರಾ ಮೇಲ್ಡಂಡೆ ನಾಲೆಯಿಂದ ನೀರು ಹರಿಸುತ್ತಿರುವ ಹಿನ್ನೆಲೆ ನೂರಾರು ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.
ತರೀಕೆರೆಯಲ್ಲಿರುವ ಭದ್ರಾ ಮೇಲ್ಡಂಡೆ ನಾಲೆಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆ ರೈತರ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ಅಜ್ಜಂಪುರ ತಾಲೂಕಿನ ಚೌಳ, ಹಿರಿಯೂರು ಹೋಬಳಿಯ ಹೆಚ್ ತಿಮ್ಮಾಪುರ, ಹನುಮನಹಳ್ಳಿ, ಕಲ್ಕರೆ ಗಡಿ ಭಾಗ, ಕಳ್ಳಿ ಹೊಸಹಳ್ಳಿ, ಹಡಗಲು, ಚಿಕ್ಕಬಳ್ಳಕೆರೆ, ಗ್ರಾಮದ ಜಮೀನುಗಳಿಗೆ ಭದ್ರಾ ನಾಲೆಯ ನೀರು ನುಗ್ಗಿದ್ದು, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿ ಹೋಗಿದೆ.
ಜೊತೆಗೆ ರಸ್ತೆಗಳ ಸಂಪರ್ಕವೂ ಹಾಳಾಗಿ ಹೋಗಿದ್ದು, ಯಾವುದೇ ರೀತಿಯ ನಾಲೆ ವ್ಯವಸ್ಥೆ ಮಾಡದೇ ನೀರು ಹರಿಸಿರುವ ಕಾರಣ ಈ ರೀತಿಯ ಸಮಸ್ಯೆ ಎದುರಾಗಿದೆ. ಇದರಿಂದ ಜಮೀನುಗಳಿಗೆ ನೀರು ನುಗ್ಗಿದೆ. ಇನ್ನು ತೆಂಗು, ಅಡಿಕೆ ತೋಟಗಳಿಗೂ ನೀರು ನುಗ್ಗಿದ್ದು, ಹಿಂಗಾರು ಬೆಳೆಯಾದ ಕಡಲೆ, ಜೋಳ ಬೆಳೆಯಲು ಅವಕಾಶ ಇಲ್ಲದಂತಾಗಿದೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.