ಚಿಕ್ಕಮಗಳೂರು: ಕಾಡುಕೋಣ ದಾಳಿಯಿಂದ ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಳಸ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಮುಜೇಕಾನ್ ಗ್ರಾಮದ ಮರಿಗೌಡ ಕಾಡುಕೋಣದಿಂದ ದಾಳಿಗೊಳಗಾದ ರೈತ. ಶನಿವಾರ ಮುಜೇಕಾನ್ ನಿಂದ ಕಳಸಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಕಾಡುಕೋಣ ದಾಳಿ ನಡೆಸಿದೆ. ಕಾಡುಕೋಣದಿಂದ ತಪ್ಪಿಸಿಕೊಳ್ಳಲು ಅವರು ನೆಲದ ಮೇಲೆ ಮಲಗಿದ್ದಾರೆ. ಆದರೂ ಬಿಡದ ಕಾಡುಕೋಣ ಮರಿಗೌಡ ಅವರ ಎದೆಗೆ ಕೊಂಬಿನಿಂದ ಇರಿದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮರಿಗೌಡರನ್ನು ಸ್ಥಳೀಯರು ಕಳಸ ಆಸ್ಪತ್ರಗೆ ದಾಖಲಿಸಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದ ನಂತರ ಮರಿಗೌಡರನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ. ಮರೀಗೌಡರ ಶ್ವಾಸಕೋಶಕ್ಕೆ ಗಂಭೀರ ಗಾಯಗಳಾಗಿವೆ. ಗಾಯದ ತೀವ್ರತೆಗೆ ಹೃದಯದ ಭಾಗಕ್ಕೂ ತೀವ್ರ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಕೆಲ ತಿಂಗಳ ಹಿಂದೆ ಕಳಸ ತಾಲೂಕಿನ ತೋಟದೂರು ಗ್ರಾಮದಲ್ಲಿ ರೈತರೊಬ್ಬರು ಕಾಡುಕೋಣ ದಾಳಿಯಿಂದ ಮೃತಪಟ್ಟಿದ್ದರು. ಈ ಭಾಗದಲ್ಲಿ ಕಾಡು ಕೋಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಹಗಲು ರಾತ್ರಿಯೆನ್ನದೇ ರಾಜಾ ರೋಷವಾಗಿ ಕಾಡು ಕೋಣಗಳು ಹಿಂಡು ಹಿಂಡಾಗಿ ತಿರುಗುತ್ತಿವೆ. ಇದರಿಂದ ಬೆಳೆಹಾನಿ ಜೊತೆಗೆ ಜೀವಭಯದಿಂದ ಜನರು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರವನ್ನು ಹುಡುಕಿ ಎಂದು ಸ್ಥಳೀಯರು ಹಾಗೂ ರೈತರು ಆಗ್ರಹಿಸಿದ್ದಾರೆ.
ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಕುಟುಂಬಸ್ಥರ ಮನೆಗಳಿಗೆ ಸಚಿವ ಈಶ್ವರ್ ಖಂಡ್ರೆ ಭೇಟಿ: ಮತ್ತೊಂದೆಡೆ, ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಕುಟುಂಬಸ್ಥರ ಮನೆಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಸಾಂತ್ವನ ಹೇಳಿದರು. ಇಂದು ಸಚಿವ ಈಶ್ವರ್ ಖಂಡ್ರೆ ನಾಣಚ್ಚಿ ಹಾಡಿ, ಅರೆಕಾಡು ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಕಾಡಾನೆ ದಾಳಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
ಬಳಿಕ ಮಾತನಾಡಿದ ಅವರು, ಆನೆ ದಾಳಿಯಿಂದ ಒಂದು ವಾರದಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ. ಇದು ನೋವಿನ ವಿಚಾರ, ಆನೆ - ಮಾನವ ಸಂಘರ್ಷ ತಡೆಗಟ್ಟಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೊದಲ ಆದ್ಯತೆ ನೀಡಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಆನೆ ದಾಳಿಯಿಂದ 25 ಜನ ಮೃತಪಟ್ಟಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಜನ ಆನೆ ದಾಳಿಗೆ ಬಲಿಯಾಗಿದ್ದಾರೆ. ಆನೆ - ಮಾನವ ಸಂಘರ್ಷ ತಡೆಯಲು ನಾವು ಕ್ರಮ ಕೈಗೊಳ್ಳುತ್ತೇವೆ. ಶಾಶ್ವತ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಕೊಡಗಿನಲ್ಲಿ ಸಾಕಷ್ಟು ಬಾರಿ ಕಾಡಾನೆ ದಾಳಿಯಾಗಿದೆ ಹೀಗಾಗಿ ಖುದ್ದಾಗಿ ಅದರ ಪರಿಶೀಲನೆಗೆ ಬಂದಿದ್ದೇನೆ. ಆನೆ ದಾಳಿ ತಡೆಯಲು ರೆಲ್ವೇ ಬ್ಯಾರಿಕೇಡ್ ಹಾಗೂ ರೆಡಿಯೋ ಕಾಲರ್ ಅಳವಡಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.
ಇತ್ತೀಚೆಗೆ ಕಾಡಾನೆ ದಾಳಿಯಿಂದ ಮೃತಪಟ್ಟ ಕೊಡಗು ಜಿಲ್ಲೆ ಸಿದ್ಧಾಪುರ ಬಳಿಯ ಬಾಡಗ-ಬಾನಂಗಾಲ ಗ್ರಾಮದ ನಿವಾಸಿ ಆಯಿಷ (63) ಅವರ ಪುತ್ರ ಲತೀಫ್ ಅವರಿಗೆ ಸಾಂತ್ವನ ಹೇಳಿದ ಸಚಿವ ಈಶ್ವರ್ ಖಂಡ್ರೆ, ಅವರಿಗೆ ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ , ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಮರಿಗೆ ಜನ್ಮದಿನ: ಹಣ್ಣು, ತರಕಾರಿಯಲ್ಲೇ ವಿಶೇಷ ಕೇಕ್ ತಯಾರಿಸಿದ ಸಿಬ್ಬಂದಿ