ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಮತ್ತೆ ಕಾಡಾನೆಗಳ ಹಾವಳಿ ಆರಂಭವಾಗಿದೆ. ನಿತ್ಯ ಕಾಡಾನೆಗಳು ನಡೆಸುತ್ತಿರುವ ದಾಂಧಲೆಗೆ ರೈತರು ಕಣ್ಣೀರು ಹಾಕುವಂತಾಗಿದ್ದು, ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಆನೆಗನ ಹಳ್ಳಿಯಲ್ಲಿ ಐದು ಕಾಡಾನೆಗಳ ದಾಂಧಲೆಗೆ ಕಾಫಿ ಬೆಳೆಗಾರರು ಹಾಗೂ ರೈತರು ಬೆಚ್ಚಿ ಬಿದ್ದಿದ್ದಾರೆ. ಕಳೆದ ಒಂದು ವರ್ಷದಿಂದ ನಿರಂತರವಾಗಿ ಒಂದೇ ಗ್ರಾಮದ ಅಕ್ಕ ಪಕ್ಕದ ತೋಟದಲ್ಲಿ ಆನೆಗಳು ದಾಳಿ ಮಾಡುವ ಮೂಲಕ ಬೆಳೆಗಳನ್ನು ನಾಶ ಮಾಡುತ್ತಿವೆ.
ಅಣ್ಣೇಗೌಡ ಹಾಗೂ ಹರೀಶ್ ಎಂಬುವರ ಅಡಕೆ, ಕಾಫಿ ತೋಟ ಮೇಲೆ ದಾಳಿ ಮಾಡಿದ್ದು, ಕಳೆದ ಒಂದು ವರ್ಷದಿಂದ 10 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳೆ ನಾಶವಾಗಿದೆ. ನಿನ್ನೆ ಮತ್ತೆ ದಾಳಿ ಮಾಡಿದ ಕಾಡಾನೆಗಳು, ನೂರಾರು ಅಡಕೆ ಮರಗಳನ್ನು ನೆಲಕ್ಕೆ ಬೀಳಿಸಿವೆ.
ಇನ್ನೊಂದೆಡೆ, ನಿರಂತರವಾಗಿ ನಡೆಯುತ್ತಿರುವ ಕಾಡಾನೆಗಳ ದಾಳಿಗೆ ರೈತರು ಬೇಸತ್ತು ಹೋಗಿದ್ದಾರೆ. ಈಗಾಗಲೇ ಸುತ್ತಮುತ್ತಲ ಗ್ರಾಮದಲ್ಲಿ ಕಳೆದ ಮೂರು ತಿಂಗಳಲ್ಲಿ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿವೆ. ಕಷ್ಟಪಟ್ಟು ಬೆಳೆದ ಅಡಕೆ, ಕಾಫಿ, ಬಾಳೆ, ತೆಂಗು ಬೆಳೆಯನ್ನು ಕಾಡಾನೆಗಳು ನಾಶ ಮಾಡುತ್ತಿದ್ದು, ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಮೂಡಿಗೆರೆಯಲ್ಲಿ ಕಾಡಾನೆಗಳು ಪ್ರತ್ಯಕ್ಷ ; ರೈತರಲ್ಲಿ ಆತಂಕ
ಈಗಾಗಲೇ ಅಡಕೆ ಫಸಲು ಬಂದಿದ್ದು, ನಿತ್ಯ ಕಾಡಾನೆಗಳು ತೋಟಗಳಿಗೆ ಎಂಟ್ರಿಕೊಟ್ಟು ದಾಳಿ ಮಾಡಿ ನೆಲಕ್ಕೆ ಬೀಳಿಸುತ್ತಿವೆ. ಇದರಿಂದಾಗಿ ಲಕ್ಷಾಂತರ ರೂ. ಮೌಲ್ಯದ ಬೆಳೆಗಳು ನಾಶವಾಗುತ್ತಿದೆ ಎಂದು ಮಕ್ಕಳಂತೆ ಸಾಕಿದ ಅಡಕೆ ಮರಗಳು ನೆಲಕ್ಕೆ ಉರುಳಿರುವುದನ್ನು ನೋಡಿ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ : ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು.. ಗಜಪಡೆ ನಡೆದಿದ್ದೇ ಹಾದಿ
ಪದೇ ಪದೆ ಕಾಡು ಪ್ರಾಣಿಗಳ ದಾಳಿಗೆ ಬೇಸತ್ತು ಹೋದ ರೈತರು ಹತ್ತು ಹಲವು ಬಾರಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿ, ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿ, ಕಾಡಾನೆಗಳ ಹಾವಳಿಗೆ ಬ್ರೇಕ್ ಹಾಕಬೇಕು ಎಂದು ಈ ಭಾಗದ ರೈತರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರು : ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಹಿಂಡು.. ಕಾಫಿ, ಅಡಿಕೆ ಬೆಳೆ ನಾಶ
ಮೂಡಿಗೆರೆ ತಾಲೂಕಿನಲ್ಲಿ ಕೂಡ ಕಾಡಾನೆ ಹಾವಳಿ: ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆಗಳು ರೈತರು ಬೆಳೆದ ಬೆಳೆಯನ್ನು ನಾಶಪಡಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಸಾರಗೋಡು, ಕುಂದೂರು ಗ್ರಾಮದಲ್ಲಿ ನಡೆದಿತ್ತು. ರೈತರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳು, ಅಪಾರ ಪ್ರಮಾಣದ ಬೆಳೆ ನಾಶಪಡಿಸಿದ್ದವು. ಕಾಡಾನೆ ದಾಳಿಗೆ ಕಾಫಿ, ಅಡಕೆ ನಾಶ ಸಂಪೂರ್ಣ ನಾಶವಾಗಿತ್ತು.
ಈ ಆನೆಗಳು ತೋಟಕ್ಕೆ ನುಗ್ಗಿರುವ ದೃಶ್ಯವನ್ನು ರೈತರೊಬ್ಬರು ಮರದ ಮೇಲೆ ಕುಳಿತು ಮೊಬೈಲಿನಲ್ಲಿ ಸೆರೆ ಹಿಡಿದಿದ್ದರು. ಅರಣ್ಯ ಸಿಬ್ಬಂದಿಗಳು ಕಾಡಾನೆ ಸ್ಥಳಾಂತರಕ್ಕೆ ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಕೆಲವು ದಿನಗಳಿಂದ ಕಾಡಾನೆ ದಾಳಿ ಮುಂದುವರೆದಿದ್ದು, ಸಾಕಷ್ಟು ಬೆಳೆ ಹಾನಿ ಆಗಿದೆ ಎಂದು ರೈತರು ದೂರಿದ್ದಾರೆ.