ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಪ್ರತಿನಿತ್ಯ ಕಾಡಾನೆಗಳ ಹಾವಳಿ ಮುಂದುವರೆಯುತ್ತಲೇ ಇದೆ. ಇದರಿಂದ ರೈತರು ಬೆಳೆದಿರುವಂತಹ ಕಾಫೀ, ಮೆಣಸು, ಅಡಿಕೆ, ಬಾಳೆ ತೋಟ ನಾಶವಾಗಿ ಹೋಗುತ್ತಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ತಾಲೂಕಿನ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಆಗಿಂದಾಗ್ಗೆ ಕಾಡಾನೆಗಳ ದಾಳಿ ನಡೆಯುತ್ತಿರುವುದರಿಂದ ಮಲೆನಾಡಿಗರು ಹೈರಾಣಾಗಿದ್ದಾರೆ. ಗೌಡಹಳ್ಳಿ, ಬೈರಾಪುರ, ಗುತ್ತಿಹಳ್ಳಿ, ಸತ್ತಿಗನಹಳ್ಳಿ, ಬಿಳ್ಳೂರು ಸೇರಿದಂತೆ ಸುತ್ತುಮತ್ತಲಿನ ಹತ್ತಾರು ಹಳ್ಳಿಯ ಜನ ಆನೆ ಹಾವಳಿಗೆ ಬೇಸತ್ತು ಹೋಗಿದ್ದಾರೆ. ಇಂದು ಕೂಡ ಮೂಲರಹಳ್ಳಿಯಲ್ಲಿ ಒಂಟಿ ಸಲಗದ ದಾಳಿಗೆ ಅಡಿಕೆ, ಮೆಣಸು, ಕಾಫಿ, ಬಾಳೆ ಬಹುತೇಕ ನಷ್ಟವಾಗಿವೆ.
ರೈತರು ಹಾಗೂ ಬೆಳೆಗಾರರು ಈ ಹಿಂದೆ ಸುರಿದ ಮಳೆಯಿಂದ ಕಂಗಾಲಾಗಿದ್ದರು. ಈಗ ಕಾಡಾನೆಗಳ ದಾಳಿಯಿಂದ ಮತ್ತೆ ಇಲ್ಲಿನ ರೈತರು ನಲಗುವಂತಾಗಿದೆ. ಅಲ್ಲದೇ ಇಲ್ಲಿನ ರೈತರು ಸಾಕಷ್ಟು ಬಾರಿ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಇಲ್ಲಿನ ಆನೆಗಳನ್ನು ಸ್ಥಳಾಂತರ ಮಾಡಿ ನಮ್ಮ ಬೆಳೆಯನ್ನು ಉಳಿಸಿಕೊಡಿ ಎಂದು ರೈತರು ಅರಣ್ಯ ಇಲಾಖೆಗೆ ಅಂಗಲಾಚುತ್ತಿದ್ದಾರೆ.