ಚಿಕ್ಕಮಗಳೂರು: ಮದುವೆಗೂ ಮುನ್ನ ಯುವಜೋಡಿಯೊಂದು ತಮ್ಮ ನಿಶ್ಚಿತಾರ್ಥದ ದಿನ ವಿಶಿಷ್ಟವಾಗಿ ಸಂಭ್ರಮಿಸಿದೆ. ಯುವಕ-ಯುವತಿ ಸಸಿ ನೆಟ್ಟು, ಪರಿಸರ ಪ್ರೇಮ ಮೆರೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಇಂದು ನಗರದ ರಾಮನಹಳ್ಳಿಯಲ್ಲಿ ಮಂಗಳೂರು ಮೂಲದ ರಂಜು ಹಾಗೂ ರಾಮನಹಳ್ಳಿಯ ಕಾವ್ಯ ಜೊತೆ ನಿಶ್ಚಿತಾರ್ಥ ನೆರವೇರಿತು. ಒಬ್ಬರಿಗೊಬ್ಬರು ಉಂಗುರವನ್ನು ಬದಾಲವಣೆ ಮಾಡಿಕೊಂಡ ನಂತರ ಈ ಜೋಡಿ ಒಟ್ಟಿಗೆ ನಗರದ ಕೋರ್ಟ್ ಆವರಣದ ಪಕ್ಕ ಇರುವ ಗಾಂಧೀ ಪಾರ್ಕ್ನಲ್ಲಿ ಸಸಿ ನೆಟ್ಟರು. ಅಲ್ಲದೆ ತಮ್ಮ ಮದುವೆ ಆಗುವವರೆಗೂ ಇದರ ಪಾಲನೆ ಪೋಷಣೆ ಮಾಡಿ ಈ ಗಿಡವನ್ನು ಬೆಳೆಸುತ್ತೇವೆ ಎಂದು ವಾಗ್ದಾನ ಮಾಡಿದರು. ಅಲ್ಲದೆ, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅದಕ್ಕೆ ಮಣ್ಣು ಹಾಕಿ ನೀರನ್ನು ಹಾಕಿ, ಅತ್ಯಂತ ಮಹತ್ವದ ಕಾರ್ಯ ಮಾಡುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಗಿಡ ನೆಟ್ಟು ಪರಿಸರ ಉಳಿಸಿ ಅದನ್ನು ಬೆಳೆಸಿ ಎಂಬ ಸಂದೇಶವನ್ನು ಸಮಾಜಕ್ಕೆ ಈ ನೂತನ ವಧು -ವರ ನೀಡಿದ್ದಾರೆ.