ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ದತ್ತ ಪೀಠದಲ್ಲಿ ನಿನ್ನೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ದತ್ತ ಜಯಂತಿಗೆ ಶುಕ್ರವಾರ ಚಾಲನೆ ದೊರಕಿದೆ.
ಅನುಸೂಯ ಜಯಂತಿ:
ಮೊದಲನೇ ದಿನವಾದ ನಿನ್ನೆ ಅನುಸೂಯ ಜಯಂತಿಯ ಪ್ರಯುಕ್ತ ಚಿಕ್ಕಮಗಳೂರು ನಗರದಲ್ಲಿ ಸಂಕೀರ್ತನಾ ಯಾತ್ರೆ ಕೈಗೊಂಡ ಒಂದೂವರೆ ಸಾವಿರಕ್ಕೂ ಅಧಿಕ ಮಹಿಳೆಯರು ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಸಿ ದತ್ತಪೀಠಕ್ಕೆ ತೆರಳಿ ಬಿಗಿ ಪೊಲೀಸ್ ಭದ್ರತೆಯಲ್ಲೇ ದತ್ತಪಾದುಕೆಯ ದರ್ಶನ ಪಡೆದರು. ಅನುಸೂಯ ದೇವಿಗೆ ಪೂಜೆ, ಹೋಮ, ಹವನ ನೆರವೇರಿಸಿದರು.
ಸಂಕೀರ್ತನಾ ಯಾತ್ರೆ:
ಇಂದು ದತ್ತಜಯಂತಿ ಆಚರಣೆ ಹಿನ್ನೆಲೆ ನಿನ್ನೆ ದತ್ತಾತ್ರೇಯನ ಮಾತೆ ಅನುಸೂಯ ಜಯಂತಿಯನ್ನು ಆಚರಿಸಲಾಯ್ತು. ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಗರದ ಐಜಿ ರಸ್ತೆ ಮೂಲಕ ಕಾಮಧೇನು ಗಣಪತಿ ದೇವಾಲಯದವರೆಗೂ ಸಂಕೀರ್ತನಾ ಯಾತ್ರೆ ಕೈಗೊಳ್ಳಲಾಯಿತು. ಮಹಿಳೆಯರಿಗೇ ಮೀಸಲಾದ ಈ ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು. ಜೈ ಜೈ ದತ್ತ, ಜೈ ಗುರು ದತ್ತ ಅನ್ನೋ ಘೋಷಣೆ ಮೆರವಣಿಗೆಯ ಉದ್ದಕ್ಕೂ ಕೇಳಿಬಂತು. ದತ್ತಪೀಠ ಹಿಂದೂಗಳಿಗೆ ಸೇರಿದ್ದು ಅನ್ನೋ ನಮ್ಮ ಬಹುಕಾಲದ ಹೋರಾಟಕ್ಕೆ ಈ ಬಾರಿ ಖಂಡಿತ ನ್ಯಾಯ ಸಿಗುತ್ತದೆ ಅನ್ನೋ ವಿಶ್ವಾಸವನ್ನು ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ವ್ಯಕ್ತಪಡಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್:
ನಗರದಲ್ಲಿ ನಡೆದ ಮೆರವಣಿಗೆ ಬಳಿಕ ದತ್ತಪೀಠಕ್ಕೆ ತೆರಳಿದ ಮಹಿಳೆಯರು ದತ್ತಪಾದುಕೆ ದರ್ಶನ ಪಡೆದು, ದತ್ತಪೀಠದ ಪೂರ್ವ ದಿಕ್ಕಿನ ಚಪ್ಪರದಲ್ಲಿ ಭಜನೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು. ಮೂರು ದಿನಗಳ ಕಾಲ ನಡೆಯೋ ದತ್ತಜಯಂತಿಯ ಮೊದಲ ದಿನದ ಪೂಜೆ ದತ್ತಾತ್ರೇಯ ಸ್ವಾಮಿಯ ತಾಯಿ ಅನುಸೂಯ ದೇವಿಗೆ ಮೀಸಲು. ಪಂಚ ಪತಿವ್ರತೆಯರಲ್ಲಿ ಒಬ್ಬಳೆನಿಸಿಕೊಂಡಿರುವ ಅನುಸೂಯ ದೇವಿಯ ಪೂಜೆ ಮಾಡಿದ್ರೆ ಇಷ್ಟಾರ್ಥಗಳು ಸಿದ್ದಿಸುತ್ತವೆಂಬ ನಂಬಿಕೆ ಭಕ್ತರಲ್ಲಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಹೆದರಿಸಿ ಮತಾಂತರ ಮಾಡುವವರು ಭಯ ಪಡಬೇಕು, ಸ್ವಯಿಚ್ಛೆಯಿಂದ ಸೇರಲಿ ತೊಡಕಿಲ್ಲ : ಸಿ ಟಿ ರವಿ
ಮೂರು ದಿನಗಳ ಕಾಲ ನಡೆಯುವ ದತ್ತ ಜಯಂತಿಗೆ ನಿನ್ನೆ ವಿದ್ಯುಕ್ತ ಚಾಲನೆ ದೊರಕಿದೆ. ಇಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಶನಿವಾರ ರಾಜ್ಯದ ಮೂಲೆ ಮೂಲೆಗಳಿಂದ ಬರುವ 25 ಸಾವಿರಕ್ಕೂ ಅಧಿಕ ದತ್ತ ಭಕ್ತರು ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿದ ನಂತರ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ.