ಚಿಕ್ಕಮಗಳೂರು: ಶಬರಿಮಲೆಗೆ ಪಾದಯಾತ್ರೆ ಹೊರಟಿರುವ ಅಯ್ಯಪ್ಪ ಸ್ವಾಮಿ ಭಕ್ತರೊಂದಿಗೆ ನಾಯಿಯೂ ಕೂಡ ಹೊರಟಿರುವ ಅಪರೂಪದ ಘಟನೆಗೆ ಚಿಕ್ಕಮಗಳೂರು ಸಾಕ್ಷಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ತೋಡಾರು ಗ್ರಾಮದ ಅಯ್ಯಪ್ಪ ಮಾಲಧಾರಿಗಳು ತಿರುಪತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಕೊಟ್ಟಿಗೆಹಾರದ ಮೂಲಕವಾಗಿ ಪಾದಯಾತ್ರೆ ಹೊರಟ್ಟಿದ್ದಾರೆ. ಅಕ್ಟೋಬರ್ 31 ರಿಂದ ಪ್ರಾರಂಭವಾಗಿರುವ ಈ ಪಾದಯಾತ್ರೆಯಲ್ಲಿ ಶ್ವಾನವೂ ಭಾಗವಹಿಸಿದ್ದು ಸತತ 16 ದಿನಗಳ ಕಾಲ ಈ ಶ್ವಾನವೂ ಪಾದಯಾತ್ರೆಯಲ್ಲಿ ಭಾಗವಹಿಸಿದೆ.
ಸತತವಾಗಿ ನಡೆದ ಪರಿಣಾಮ ಶ್ವಾನದ ಕಾಲಿಗೆ ಗಾಯವಾಗಿರುವ ಕಾರಣ ಎರಡೂ ಬಾರಿ ಈ ಶ್ವಾನಕ್ಕೆ ಚಿಕಿತ್ಸೆಯನ್ನು ಸಹ ಮಾಲಾಧಾರಿಗಳು ಕೊಡಿಸಿದ್ದಾರೆ. ತಿರುಪತಿಯಿಂದ ಪಾದಯಾತ್ರೆಯ ಮೂಲಕ ಶಬರಿಮಲೆಗೆ ಹೊರಟಿರುವ ಒಟ್ಟು ಆರು ಮಾಲಧಾರಿಗಳ ಜೊತೆ ನಿರಂತರವಾಗಿ ಈ ಶ್ವಾನವೂ ಪಾದಯಾತ್ರೆ ಮಾಡಿದ್ದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.