ಪಟಾನ್ (ಗುಜರಾತ್): ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ರ್ಯಾಗಿಂಗ್ಗೆ ಒಳಗಾಗಿ ಎಂಬಿಬಿಎಸ್ ವಿದ್ಯಾರ್ಥಿ ಸಾವು ಪ್ರಕರಣದಲ್ಲಿ 15 ಆರೋಪಿತ ಹಿರಿಯ ವಿದ್ಯಾರ್ಥಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಪಟಾನ್ ಜಿಲ್ಲೆಯ ಧಾರ್‌ಪುರನಲ್ಲಿರುವ ಜಿಎಂಇಆರ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನವೆಂಬರ್ 16 ರಂದು ರಾತ್ರಿ ಹಿರಿಯ ವಿದ್ಯಾರ್ಥಿಗಳ ವಿನೋದದ ಕಾಟಕ್ಕೆ (ರ‍್ಯಾಗಿಂಗ್) ಕಿರಿಯ ವೈದ್ಯ ವಿದ್ಯಾರ್ಥಿ ಅನಿಲ್ ನಟವರ್ಭಾಯಿ ಮೆಥಾನಿಯಾ (18) ಸಾವನ್ನಪ್ಪಿದ್ದರು.
ಇದರ ವಿರುದ್ಧ ಕಾಲೇಜಿನ ಹೆಚ್ಚುವರಿ ಡೀನ್ ಮತ್ತು ಪ್ರೊಫೆಸರ್ ಅನಿಲ್ ಕುಮಾರ್ ಗೋಕುಲ್ ಸಿಂಗ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಿದ್ದಾರೆ.
ಆ ರಾತ್ರಿ ಏನಾಯ್ತು?: ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ನವೆಂಬರ್ 16 ರಂದು ರಾತ್ರಿ ಕಾಲೇಜು ಆವರಣದ ಬಾಲಕರ ಹಾಸ್ಟೆಲ್ ಬ್ಲಾಕ್-ಬಿ ಎರಡನೇ ಮಹಡಿಯಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ರ‍್ಯಾಗಿಂಗ್ ಮಾಡಿದ್ದಾರೆ. ಎಲ್ಲರನ್ನೂ ಒಂದು ಕೋಣೆಗೆ ಕರೆಸಿ ಹಾಡು, ನೃತ್ಯ ಮಾಡಲು ಹೇಳಿದ್ದಾರೆ. ಬಳಿಕ ಒಂದೇ ಕಡೆ ಅಲುಗಾಡದಂತೆ ಮೂರು ಗಂಟೆಗೂ ಹೆಚ್ಚು ನಿಲ್ಲಿಸಿದ್ದಾರೆ.
ಕೋಣೆಯಿಂದ ಹೊರಗೆ ಹೋಗಲು ಬಿಡದೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ. ನಿರಂತರವಾಗಿ ಒಂದೇ ಕಡೆ ನಿಂತಿದ್ದರಿಂದ ಅನಿಲ್ ತಲೆ ಸುತ್ತು ಬಂದು ಕೆಳಗೆ ಬಿದ್ದಿದ್ದಾನೆ. ಇದು ರಾತ್ರಿ 8.30ರ ಸುಮಾರಿಗೆ ನಡೆದಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾನೆ. ಘಟನೆಯ ಬಗ್ಗೆ ಮೆಡಿಕಲ್ ಕಾಲೇಜು ಡೀನ್ ಅವರಿಗೆ ಮಧ್ಯರಾತ್ರಿ 1 ಗಂಟೆಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿ ಅನಿಲ್ ವೈದ್ಯಕೀಯ ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಬಿಎಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಒಂದು ತಿಂಗಳ ಹಿಂದೆಯಷ್ಟೇ ಆತ ಪ್ರವೇಶ ಪಡೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ವಿದ್ಯಾರ್ಥಿಗಳಿಗೆ ಅಮಾನತು ಶಿಕ್ಷೆ: ಕಾಲೇಜಿನ ರ‍್ಯಾಗಿಂಗ್ ವಿರೋಧಿ ಸಮಿತಿಯು ವಿದ್ಯಾರ್ಥಿ ಸಾವಿನ ಬಗ್ಗೆ ವೈದ್ಯಕೀಯ ಕಾಲೇಜಿನ ಡೀನ್ ಅವರ ನೇತೃತ್ವದಲ್ಲಿ ಶಂಕಿತ 15 ಹಿರಿಯ ವಿದ್ಯಾರ್ಥಿಗಳನ್ನು ಕರೆಸಿ ವಿಚಾರಣೆ ನಡೆಸಿದೆ. ಈ ಎಲ್ಲ ವಿದ್ಯಾರ್ಥಿಗಳು ರ್ಯಾಗಿಂಗ್ನಲ್ಲಿ ಭಾಗಿಯಾಗಿದ್ದಾರೆ ಎಂದು ಸಾಬೀತಾದ ಹಿನ್ನೆಲೆ, ಅವರನ್ನು ಹಾಸ್ಟೆಲ್ ಮತ್ತು ಶೈಕ್ಷಣಿಕ ಚಟುವಟಿಕೆಗಳಿಂದ ಅಮಾನತು ಮಾಡಲಾಗಿದೆ. ಸದ್ಯ ಆರೋಪಿ 15 ವಿದ್ಯಾರ್ಥಿಗಳನ್ನು ಪೊಲೀಸರ ವಶದಲ್ಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಇದನ್ನೂ ಓದಿ: ಹಿರಿಯ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್; ಎಂಬಿಬಿಎಸ್ ವಿದ್ಯಾರ್ಥಿ ಸಾವು, ನ್ಯಾಯಕ್ಕೆ ಪೋಷಕರ ಆಗ್ರಹ