ಬೆಂಗಳೂರು: ನಬಾರ್ಡ್ನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಕಳೆದ ಬಾರಿ ಕರ್ನಾಟಕಕ್ಕೆ 5,600 ಕೋಟಿ ರೂ. ಸಾಲ ನೀಡಿದ್ದ ನಬಾರ್ಡ್, ಈ ವರ್ಷ 2,340 ಕೋಟಿ ಸಾಲ ನೀಡಿದೆ. ಸಾಲದ ಪ್ರಮಾಣ ಶೇ.58 ರಷ್ಟು ಕಡಿತ ಮಾಡಲಾಗಿದೆ. ಇದು ಕರ್ನಾಟಕಕ್ಕೆ ಆದ ಅನ್ಯಾಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿಂದು ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ರೈತರು ಆರ್ಥಿಕವಾಗಿ ಮೇಲೆ ಬರಬೇಕು. ಗ್ರಾಮೀಣ ಪ್ರದೇಶ ಅಭಿವೃದ್ಧಿಯಾಗಬೇಕು. ಇದು ನಮ್ಮ ಸರ್ಕಾರದ ಉದ್ದೇಶ. ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ಗಳೂ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 2024-25ನೇ ಸಾಲಿಗೆ 35 ಲಕ್ಷ ರೈತರಿಗೆ 25 ಸಾವಿರ ಕೋಟಿ ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದರು.
ರಾಜ್ಯದಲ್ಲಿ 2023-24ನೇ ಸಾಲಿಗೆ ಅಲ್ಪಾವಧಿ ಕೃಷಿ ಪತ್ತಿನ ಸಂಸ್ಥೆಗಳ ಮೂಲಕ 22,902 ಕೋಟಿ ಅಲ್ಪಾವಧಿ ಸಾಲ ವಿತರಿಸಲಾಗಿತ್ತು. ರಾಜ್ಯ ಅಪೆಕ್ಸ್ ಬ್ಯಾಂಕ್ 2024-25ನೇ ಸಾಲಿಗೆ 9162 ಕೋಟಿ ರೂ.ಗಳ ರಿಯಾಯಿತಿ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಮಂಜೂರು ಮಾಡಲು ಕೋರಲಾಗಿದೆ. ಆದರೆ, ನಬಾರ್ಡ್ ಪತ್ರದಲ್ಲಿ ಕರ್ನಾಟಕಕ್ಕೆ 2,340 ಕೋಟಿ ರೂ ಮಂಜೂರು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅವರು 4.5 ಪರ್ಸೆಂಟ್ನಲ್ಲಿ ಸಾಲ ಕೊಡ್ತಿದ್ದರು:ನಬಾರ್ಡ್ ನವರು ನಮಗೆ 4.5% ಬಡ್ಡಿ ದರದರಲ್ಲಿ ಹಣ ಕೊಡ್ತಿದ್ರು. ನಾವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುತ್ತಿದ್ದೆವು. 1200 ಕೋಟಿಯಷ್ಟು ಸರ್ಕಾರ ತುಂಬುತಿತ್ತು. ನಬಾರ್ಡ್ನಿಂದ 5600 ಕೋಟಿ ಬರುತಿತ್ತು. ಅದರ ಹಿಂದಿನ ವರ್ಷ 5400 ಕೋಟಿ ನೀಡಿದ್ದರು. ಈ ಬಾರಿ ನಾವು ನಬಾರ್ಡ್ಗೆ ಮನವಿ ಸಲ್ಲಿಸಿದ್ದು, 5600 ಕೋಟಿ ರೂ.ಗೂ ಹೆಚ್ಚು ಹಣ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಈ ಬಾರಿ 2,340 ಕೋಟಿ ರೂ. ಬಂದಿದೆ ಎಂದರು.
ಇದರಿಂದ ರೈತರಿಗೆ ಸಾಲ ನೀಡುವುದು ಕಷ್ಟ. ರೈತರ ಬೇರೆಡೆ ಸಾಲ ಪಡೆದು ತೊಂದರೆಗೆ ಸಿಲುಕುತ್ತಾರೆ. ಈ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಹಾಗೂ ಕೇಂದ್ರದ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದೆ. ನಮ್ಮ ರಾಜ್ಯದ ಸಂಸದರಿಗೆ ನಾನು ಮನವಿ ಮಾಡಿದ್ದೆ. ಇದರ ಬಗ್ಗೆ ಒತ್ತಡ ತರುವಂತೆ ಮನವಿ ಮಾಡಿದ್ದೆ. ಈ ಬಾರಿ ಯಾವುದೇ ಮುನ್ಸೂಚನೆ ಇಲ್ಲದೆ ಕಡಿತ ಮಾಡಲಾಗಿದೆ. ಮುಖ್ಯಮಂತ್ರಿಗಳು ಕೂಡ ಕೇಂದ್ರಕ್ಕೆ ಪತ್ರ ಬರೆದಿದ್ದರು. ಇಷ್ಟೆಲ್ಲಾ ಆದರೂ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಹೇಳಿದರು.
ಹೆಚ್ಡಿಕೆ ಅನ್ಯಾಯದ ವಿರುದ್ಧ ಯಾಕೆ ಬಾಯಿ ಬಿಡುತ್ತಿಲ್ಲ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ರೈತರಿಗೆ ಶಕ್ತಿ ತುಂಬಲು ಸಹಕಾರ ಸಂಘಗಳಿವೆ. ಇವುಗಳಿಗೆ ಬಲ ತುಂಬಲು ನಬಾರ್ಡ್ ಇದೆ. 2020-21 ರಲ್ಲಿ 5500 ಕೋಟಿ ಸಾಲ ಬಂದಿದೆ. 2021-22 ರಲ್ಲಿ 5483 ಕೋಟಿ ರೂ. ಬಂದಿದೆ. 2022-23 ರಲ್ಲಿ 5550 ಕೋಟಿ ರೂ. ಬಂದಿದೆ. 2023-24 ರಲ್ಲಿ 5600 ಕೋಟಿ ರೂ. ಬಂದಿದೆ. ಆದರೆ, ಈ ಬಾರಿ ಕೇವಲ 2340 ಕೋಟಿ ಬಂದಿದೆ. ರಾಜ್ಯದಲ್ಲಿ ಮೂವರು ಕೇಂದ್ರ ಸಚಿವರಿದ್ದಾರೆ. ರೈತರ ಪರ ಅನ್ನೋ ಕುಮಾರಸ್ವಾಮಿ ಇದ್ದಾರೆ. ಯಾಕೆ ಇದರ ಬಗ್ಗೆ ಅವರು ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಬೇಕಿಲ್ಲ: ಮತ್ತೊಂದೆಡೆ, ಸಿಎಂ ಶಕ್ತಿ ಪ್ರದರ್ಶನದ ಸಮಾವೇಶ ನಡೆಸುವ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸಚಿವ ಕೆ.ಎನ್. ರಾಜಣ್ಣ, ಸಿಎಂ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಬೇಕಿಲ್ಲ. ಅವರಿಗೆ ಶಕ್ತಿ ಈಗಾಗಲೇ ಬಹಳ ಇದೆ. ಸಿಎಂ ಟಗರು, ಎಂಟತ್ತು ಹೆಣ್ಣು ಕುರಿಗಳು ಇದ್ದರೆ ಟಗರು ಒಂದೇ ಇರುವುದು. ಹಾಗೆಯೇ ಸಿದ್ದರಾಮಯ್ಯ ಒಬ್ಬರೇ ಇರುವುದು ಎಂದರು.
ತುಮಕೂರಿನಲ್ಲಿ ಸರ್ಕಾರದ ಸಮಾವೇಶ ಇದೆ. ಡಿಸೆಂಬರ್ 2 ರಂದು ಸಿಎಂ ಸಿದ್ದರಾಮಯ್ಯ ತುಮಕೂರಿಗೆ ಬರುತ್ತಾರೆ. ಅದು ರಾಜಕೀಯ ಸಮಾವೇಶವಲ್ಲ. ಸರ್ಕಾರಿ ಸೌಲಭ್ಯಗಳ ವಿತರಣಾ ಸಮಾವೇಶ. ಇದರ ಜೊತೆಗೆ ಡಿಸೆಂಬರ್ 5 ರಂದು ಹಾಸನದಲ್ಲಿ ಸಮಾನ ಮನಸ್ಕರು ಸೇರಿ ಒಂದು ರಾಜಕೀಯ ಸಮಾವೇಶ ಮಾಡಲು ಮುಂದಾಗಿದ್ದೇವೆ. ಪಕ್ಷವನ್ನು ಒಳಗೊಂಡಂತೆ ಸಮಾವೇಶ ಮಾಡುತ್ತೇವೆ. ಆದರೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ: BTS-2024ಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ; ಎಐ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ ಘೋಷಣೆ