ಚಿಕ್ಕಮಗಳೂರು : ಕೊರೊನಾ ಭೀತಿ ಹಿನ್ನೆಲೆ ಸಂಪೂರ್ಣ ಜಿಲ್ಲೆಯನ್ನು ಬಂದ್ ಮಾಡಲಾಗಿದ್ದು, ಪ್ರತಿನಿತ್ಯದ ವಸ್ತುಗಳನ್ನು ತೆಗೆದುಕೊಳ್ಳಲು ಬಡವರು, ನಿರ್ಗತಿಕರು, ವಯೋವೃದ್ಧರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಹಿನ್ನೆಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸರು ಸಾರ್ವಜನಿಕರಿಗೆ ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದಾರೆ.
ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸುತ್ತ ಮುತ್ತಲ ಹಳ್ಳಿಗಳಲ್ಲಿ ಪೊಲೀಸರೇ ತರಕಾರಿ ಹಾಗೂ ದಿನ ನಿತ್ಯದ ಪಡಿತರಗಳನ್ನು ತಮ್ಮ ಸ್ವಂತ ಹಣದಿಂದ ಖರೀದಿ ಮಾಡಿ, ಬಡವರು, ನಿರ್ಗತಿಕರು, ವಯೋವೃದ್ಧರನ್ನು ಹುಡುಕಿ, ಅವರಿಗೆ ಆಹಾರಸಾಮಗ್ರಿಯನ್ನು ನೀಡಿದ್ದಾರೆ.
ಲಕ್ಕವಳ್ಳಿ ಪೊಲೀಸರು ಖುದ್ದು ಬಡವರ ಮನೆಯ ಬಾಗಿಲಿಗೆ ಹೋಗಿ ವಿತರಣೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮನೆಯಿಂದ ನೀವು ಹೊರ ಬರಬೇಡಿ. ನಿಮಗೆ ಏನೇ ವಸ್ತುಗಳು ಬೇಕಾದರೂ ನಮಗೆ ಹೇಳಿ, ನಾವು ತಂದು ಕೊಡುತ್ತೇವೆ ಎಂದು ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದಾರೆ.