ಚಿಕ್ಕಮಗಳೂರು : ಶೃಂಗೇರಿಗೆ ಮುಖ್ಯಮಂತ್ರಿಗಳು ಆಗಮಿಸಿದ್ದಾರೆ. ಜನರು ತಮ್ಮ ಅಗತ್ಯತೆಗೆ ಅನುಗುಣವಾಗಿಲ್ಲದ ಆಸ್ಪತ್ರೆಯ ಕುರಿತು ಬ್ಯಾನರ್ ಅಳವಡಿಸಿ ತಮ್ಮ ಸಮಸ್ಯೆಯನ್ನು ವ್ಯಕ್ತಪಡಿಸಿದ್ದಾರೆ. ಶೃಂಗೇರಿ ತಾಲೂಕಿನ ಜನರು ಕಳೆದ ಅನೇಕ ವರ್ಷಗಳಿಂದ ಊರಿಗೊಂದು ನೂರು ಬೆಡ್ ಆಸ್ಪತ್ರೆ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಮನವಿ ಸಲ್ಲಿಕೆ, ಹೋರಾಟ, ಪ್ರತಿಭಟನೆ, ಶೃಂಗೇರಿ ಬಂದ್ ಕೂಡ ನಡೆಸಿದ್ದರು. ಆದರೆ, ಅವರಿಗೆ ನೀಡಿರುವ ಆಶ್ವಾಸನೆಗಳು ಕೇವಲ ಆಶ್ವಾಸನೆಯಾಗಿಯೇ ಉಳಿದಿರುವ ಕಾರಣ ವಿಭಿನ್ನವಾಗಿ ಬ್ಯಾನರ್ ಅಳವಡಿಸಿ ಮುಖ್ಯಮಂತ್ರಿಗಳ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.
ಶೃಂಗೇರಿಗೆ ಆಗಮಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳಿಗೆ ಆತ್ಮೀಯ ಸ್ವಾಗತ. ಶೃಂಗೇರಿ ಸುಸಜ್ಜಿತ ಆಸ್ಪತ್ರೆ ಮಂಜೂರಾತಿ ಕಡತವು ಕಳೆದ 15 ವರ್ಷಗಳಿಂದ ಪ್ರಗತಿಯಲ್ಲಿದೆ. ಏನಾದರೂ ಅವಘಡ ಸಂಭವಿಸಿದರೆ ಸುಸಜ್ಜಿತ ಆಸ್ಪತ್ರೆಯಿಲ್ಲ. ನಿಮ್ಮ ಹಾಗೂ ನಮ್ಮೂರಿನ ಜನರ ಸುರಕ್ಷತೆಯ ದೃಷ್ಟಿಯಿಂದ ದಯವಿಟ್ಟು ನಿಧಾನವಾಗಿ ಚಲಿಸಿ. ತೀವ್ರ ಅನಾರೋಗ್ಯವಾದರೆ 100 ಕಿಲೋಮೀಟರ್ ದೂರದ ಆಸ್ಪತ್ರೆಗೆ ತೆರಳಬೇಕಾಗಿರುವ ಕಾರಣ ದಯಮಾಡಿ ನಿಧಾನವಾಗಿ ಚಲಿಸಿ ಎಂಬ ಬ್ಯಾನರ್ ಅಳವಡಿಕೆ ಮಾಡಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಅಮಾಯಕರ ಬಂಧನವಾಗಿಲ್ಲ: ಸಿಎಂ ಬೊಮ್ಮಾಯಿ
ಬ್ಯಾನರ್ ಅಳವಡಿಸಿರುವ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಹಾಗೂ ಸಾರ್ವಜನಿಕರು ಈ ಹಿಂದಿನಿಂದಲೂ ಆಸ್ಪತ್ರೆಗಾಗಿ ಹೋರಾಟ ಮಾಡಿದ್ದರು. ಆದರೆ, ಆಸ್ಪತ್ರೆ ನಿರ್ಮಾಣಕ್ಕೆ ಇನ್ನೂ ಮಂಜೂರಾತಿ ದೊರೆತಿಲ್ಲ. ಈ ಕುರಿತು ಶೀಘ್ರವಾಗಿ ಕ್ರಮ ಕೈಗೊಂಡು ಆಸ್ಪತ್ರೆ ನಿರ್ಮಾಣಕ್ಕೆ ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಕೊಡಬೇಕೆಂದು ಸಾರ್ವಜನಿಕರು ಹಾಗೂ ಆಸ್ಪತ್ರೆ ಹೋರಾಟ ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.