ಚಿಕ್ಕಮಗಳೂರು: ಮಲ್ಲೇನಹಳ್ಳಿಯ ಬಿಂಡಿಗ ದೇವಿರಮ್ಮನ ದೇವಾಲಯದ ಗರ್ಭಗುಡಿಯ ಬಾಗಿಲಲ್ಲಿ ಹಾಕಿದ ಪರದೆ ತಾನಾಗಿಯೇ ತೆರದುಕೊಂಡಿತು. ಈ ಮೂಲಕ ಬೆಟ್ಟದಲ್ಲಿ ನೆಲಸಿದ್ದ ದೇವಿರಮ್ಮ ದೇವಿ ಇಂದು ಗಾಳಿರೂಪದಲ್ಲಿ ಗರ್ಭಗುಡಿ ಪ್ರವೇಶಿಸಿದ್ದನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಹೌದು, ವರ್ಷದ 364 ದಿನ ಗರ್ಭ ಗುಡಿಯಲ್ಲಿ ದರ್ಶನ ನೀಡೋ ದೇವಿರಮ್ಮ, ತನ್ನನ್ನು ನೋಡಲು ಬೆಟ್ಟ ಹತ್ತಿ ಬರೋ ಭಕ್ತರಿಗೆ ದರ್ಶನ ನೀಡಲೆಂದೇ ದೀಪಾವಳಿ ಅಮಾವಸ್ಯೆಯ ಹಿಂದಿನ ರಾತ್ರಿ ಬೆಟ್ಟದಲ್ಲಿ ನೆಲೆಸಿರುತ್ತಾಳೆ. ವರ್ಷದ ಒಂದು ದಿನ ಬೆಟ್ಟದಲ್ಲಿ ದರ್ಶನ ನೀಡೋ ದೇವಿ ನಂತರ ಬೆಟ್ಟವನ್ನಿಳಿದು ಗರ್ಭಗುಡಿ ಪ್ರವೇಶಿಸುತ್ತಾಳೆ ಎಂಬ ನಂಬಿಕೆಗೆ 800 ವರ್ಷಗಳಿಂದ ಭಕ್ತರಲ್ಲಿ ಇದೆ. ಇಂದು ದೇವಿ ಮೂರು ಸಾವಿರ ಅಡಿ ಎತ್ತರದಲ್ಲಿರೋ ಬೆಟ್ಟವನ್ನಿಳಿದು ಬಂದು ಗರ್ಭಗುಡಿ ಪ್ರವೇಶಿಸುವ ಕೌತುಕವನ್ನು ನೋಡಲು ಭಕ್ತ ಸಮೂಹವೇ ಹರಿದು ಬಂದಿತ್ತು.
ಗಾಳಿರೂಪದಲ್ಲಿ ಗರ್ಭಗುಡಿ ಪ್ರವೇಶಿಸಿದ ದೇವಿರಮ್ಮ ದೇವಿ: ಇಂದು ಬೆಳಗ್ಗೆ ದೇವಾಲಯದ ಗರ್ಭ ಗುಡಿಯ ಬಾಗಿಲಿಗೆ ಹಾಕಿದ್ದ ಪರದೆ ಓರ್ವ ವ್ಯಕ್ತಿ ಒಳ ಹೋಗುವಷ್ಟು ಸರಿದದ್ದನ್ನು ಕಂಡ ಭಕ್ತರು ದೇವಿ ಗರ್ಭಗುಡಿಯನ್ನು ಪ್ರವೇಶಿಸಿದಳು ಎಂದು ಸಂಭ್ರಮಿಸಿದರು. ವಾದ್ಯಗೋಷ್ಠಿ, ಅಷ್ಟದಿಕ್ಕುಗಳ ಪೂಜೆಯ ಬಳಿಕ 7 ಕಿ.ಮೀ. ಬೆಟ್ಟದ ಮೇಲಿರೋ ದೇವಿ ಕೆಳಗಿರೋ ದೇವಾಲಯವನ್ನು ಪ್ರವೇಶಿಸುತ್ತಾಳೆಂಬುದು ಭಕ್ತರ ನಂಬಿಕೆಯಾಗಿದೆ.
ಆಧುನಿಕ ಕಾಲದಲ್ಲೂ ದೇವಾಲಯದ ಬಾಗಿಲಿನ ಪರದೆ ತಾನಾಗೇ ತೆರೆದುಕೊಳ್ಳೋದು ನೋಡುಗರಲ್ಲಿ ಕುತೂಹಲ ಮೂಡಿಸಿದರೇ, ಪ್ರಜ್ಞಾವಂತರಲ್ಲಿ ಸಂಶಯ ಹುಟ್ಟಾಕಿದೆ. ಆದರೇ ಈ ದೇವಿಯ ಶಕ್ತಿ ಅಪಾರ ಅನ್ನೋದು ಭಕ್ತರ ಬಲವಾದ ನಂಬಿಕೆ. ಹರಕೆ ಕಟ್ಟಿ ಕೊಂಡರೇ ಎಂತಹಾ ಸಮಸ್ಯೆ ಕೂಡ ಮುಂದಿನ ವರ್ಷದೊಳಗೆ ಈಡೇರುತ್ತೆ ಅನ್ನೋದು ಅಸಂಖ್ಯಾತ ಭಕ್ತರ ನಂಬಿಕೆ. ಪ್ರತಿ ವರ್ಷ ಸಾವಿರಾರು ಭಕ್ತರು ದೀಪವಾವಳಿಯ ಮೂರು ದಿನ ಬಂದು ಹರಕೆ ತೀರಿಸುತ್ತಾರೆ.
ಈ ವರ್ಷ ಮಳೆಯ ಮಧ್ಯೆಯೂ 50 ಸಾವಿರಕ್ಕೂ ಅಧಿಕ ಭಕ್ತರು ಬರಿಗಾಲಲ್ಲೇ ಬೆಟ್ಟ ಹತ್ತಿ ದೇವಿರಮ್ಮ ದೇವಿಯ ದರ್ಶನ ಪಡೆದಿದ್ದಾರೆ. ದೀಪಾವಳಿಯ ಬೆಳಗಿನ ಜಾವ ದೇವಾಲಯದ ಆವರಣದಲ್ಲಿ ಕೆಂಡ ತುಳಿಯೋ ಮೂಲಕವೂ ನೂರಾರು ಭಕ್ತರು ಹರಕೆ ತೀರಿಸುತ್ತಾರೆ. ನಿನ್ನೆ ಹಾಗೂ ಇಂದು ಭಕ್ತರು ತಂದ ಬಟ್ಟೆ, ಬೆಣ್ಣೆ, ತುಪ್ಪವನ್ನ ದೇವಾಲಯದ ಮುಂಭಾಗ ಸುಟ್ಟು ಅದನ್ನ ಭಕ್ತರಿಗೆ ಭಸ್ಮವಾಗಿ ನೀಡಲಾಯಿತು.
ಒಟ್ಟಾರೆಯಾಗಿ, ದೀಪಾವಳಿ ಎರಡನೇ ದಿನವಾದ ಇಂದು ದೇವಿರಮ್ಮನ ದೇವಸ್ಥಾನಕ್ಕೆ ಜನ ಸಾಗರವೇ ಹರಿದು ಬಂದಿತ್ತು. ದೇವಿಯ ಈ ವಿಸ್ಮಯವನ್ನು ಭಕ್ತರು ಕಣ್ತುಂಬಿಕೊಂಡರು.
ಇದನ್ನೂ ಓದಿ: ಚಿಕ್ಕಮಗಳೂರು: 3 ಸಾವಿರ ಅಡಿ ಬೆಟ್ಟ ಏರಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು