ಚಿಕ್ಕಮಗಳೂರು: ಉಡುಪಿ - ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮತಯಾಚನೆಗೆಗಾಗಿ ಮೈತ್ರಿ ಪಕ್ಷದ ಮುಖಂಡರು ಆಯೋಜನೆ ಮಾಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಭಾಗವಹಿಸಿ ನರೇಂದ್ರ ಮೋದಿ ವಿರುದ್ದ ಟೀಕೆಗಳ ಸುರಿಮಳೆಯೇ ಹರಿಸಿದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀಕ್ಷಣ ವಾಗ್ದಾಳಿ ನಡೆಸಿದ ಮಾಜಿ ಪ್ರಧಾನಿ ದೇವೇಗೌಡ, ಮೋದಿ-ಮೋದಿ ಅಂತಾರೆ ಎಂದು ವೇದಿಕೆಯ ಮೇಲೆಯೇ ತಲೆ ಚಚ್ಚಿಕೊಂಡರು. ಐ ಆ್ಯಮ್ ಎಂಟರಿಂಗ್ ದಿ ಟೆಂಪಲ್ ಆಫ್ ಡೆಮಾಕ್ರಸಿ ಎಂದು ಮೋದಿ ಪಾರ್ಲಿಂಮೆಂಟ್‍ಗೆ ಕಾಲಿಡುವಾಗ ನಡೆದುಕೊಂಡ ರೀತಿಯನ್ನು ವೇದಿಕೆ ಮೇಲೆ ಕೃತಕವಾಗಿ ಅಭಿನಯಿಸಿ ದೇವೇಗೌಡರು ತೋರಿಸಿದರು. ಸಿದ್ದರಾಮಯ್ಯ ಅವರಿಗೆ ಈ ದೇಶ ಆಳುವ ಯೋಗ್ಯತೆ ಇಲ್ವಾ ಎಂದು ಹಳೇ ಶಿಷ್ಯನ ಪರ ಬ್ಯಾಟ್ ಬೀಸಿದರು.
ಚಿಕ್ಕಮಗಳೂರಿನಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಮತಯಾಚನೆ ಮಾಡಿದ ದೇವೇಗೌಡರು, ಹೊರದೇಶದವರು ಯುದ್ಧ ಮಾಡೋಕೆ ಬಂದಾಗ ಎದ್ದು ನಿಲ್ಲೋದಕ್ಕೆ ಮೋದಿ ಒಬ್ಬರಿಂದ ಮಾತ್ರ ಸಾಧ್ಯಾನಾ, ಯಾವೋನ್ ರೀ. ನಾನು ನೋಡದ ಮೋದಿ ನಾ. ವಾಜಪೇಯಿ ಯುದ್ಧ ಮಾಡಲಿಲ್ಲವಾ, ಇಂದಿರಾ ಗಾಂಧಿ ಯುದ್ದ ಮಾಡಿ ಗೆಲ್ಲಲಿಲ್ಲವಾ. ನಮ್ಮ ಸೈನ್ಯ ಅಷ್ಟು ಬಲವಾಗಿದೆ. ರೈತರ ಮಕ್ಕಳು ಮೋಸ ಹೋಗಬಾರದು. ಇವತ್ತು ನಮ್ಮ ಮಕ್ಕಳು ಮೋದಿ-ಮೋದಿ ಅಂತಾರೆ. ನಾನ್ ನೋಡದ ಮೋದಿನಾ. ನಿಮ್ಮ ಆಶೀರ್ವಾದದಿಂದ ನಾನು ಪಾರ್ಲಿಮೆಂಟ್ ಹೋಗೋದು ಸತ್ಯ. ಈ ಸಲ ಸಂಖ್ಯಾ ಬಲ ಜಾಸ್ತಿ ಆಗುತ್ತೆ. ಸುಮ್ಮನೇ ಕೂರೋ ಮಾತೇ ಇಲ್ಲ. ವಯಸ್ಸು 86 ಇರಬಹುದು. ಆದರೆ, ಹೋರಾಟ ಮಾಡೋ ಕಿಚ್ಚು ಈ ರೈತನ ಮಗನಿಗಿದೆ ಎಂದು ಹೇಳಿದರು.
ಮಾತೆತ್ತಿದರೆ ನಾನೇ ಮಾಡಿದ್ದು. ಆ ಪ್ರಧಾನಿ ಸ್ಥಾನದ ಗೌರವಕ್ಕೆ ತಕ್ಕಂತೆ ಮಾತನಾಡಲ್ಲ. ನಮ್ಮ ಸೈನಿಕರಿಗೆ ಶೂ ಇರಲಿಲ್ಲ. ಉಡುಪು ಇರಲಿಲ್ಲ. ಎದೆಗೆ ಹಾಕೋಕೆ ಕವಚ ಇರಲಿಲ್ಲ. ನಾನು ಕೊಟ್ಟೆ. ಹಾಗಾದರೇ ವಾಜಪೇಯಿ ಕಾರ್ಗಿಲ್ ಯುದ್ಧ ಮಾಡಿದಾಗ ಸೈನಿಕರಿಗೆ ಶೂ ಇರಲಿಲ್ಲವೇ. ಹೇಳೋ ಮಾತಿಗೆ ಒಂದು ಅರ್ಥ ಇರಬೇಕು, ಆ ಮನುಷ್ಯನಿಗೆ. ನಮಗೂ ಬರುತ್ತೆ ಐಟಿ ಅವರಿಗೆ ಬೆಂಗಳೂರಿನಲ್ಲಿ ಯಾರು ಮೂಲವಾಗಿ ಶಕ್ತಿ ಕೊಟ್ಟೋರು. 1971ರಲ್ಲಿ ಪಾಕಿಸ್ತಾನ-ಇಂಡಿಯಾ ಯುದ್ಧ ಮಾಡಿದಾಗ ಇಂದಿರಾ ಗೆಲ್ಲಲ್ಲಿವಾ. ಏನೋ ದೊಡ್ಡದಾಗಿ ಕಡಿದು ಕಟ್ಟೆ ಹಾಕಿದ್ದೇನೆಂದು ಮಾಧ್ಯಮಗಳನ್ನು ಜೊತೆಗೆ ಇಟ್ಕೊಂಡು ಮೋದಿ-ಮೋದಿ ಅಂತಾರೆಂದು ತಲೆ ಚಚ್ಚಿಕೊಂಡರು.
ನಾಲ್ಕು ವರ್ಷದ ಹಿಂದ ರಾಹುಲ್ ಏನೂ ಪ್ರಯೋಜನವಿಲ್ಲ ಎಂದು ಬಿಂಬಿಸಿದ್ದರು. ಆತ ಇಂದು ರಫೆಲ್‍ನಲ್ಲಿ ನೀವು 30 ಸಾವಿರ ಕೋಟಿ ಅಕ್ರಮ ಮಾಡಿದ್ದೀರೆಂದು ಚಾಲೆಂಜ್ ಮಾಡುತ್ತಾನೆ. ಆ ಯುವಕ. ಆದರೆ, ಪ್ರಧಾನಿ ಮೋದಿ ಪಾರ್ಲಿಮೆಂಟ್ ಒಳಗೆ ಬರಲಿಲ್ಲ ಎಂದು ವ್ಯಂಗ್ಯ ಮಾಡಿದರು. ಈ ಬಾರಿ ಮೈತ್ರಿ ಅಭ್ಯರ್ಥಿಯ ಪರ ಮತ ನೀಡಿ ಗೆಲ್ಲಿಸಿಕೊಡಿ ನನಗೆ ಶಕ್ತಿ ತುಂಬಿ ಎಂದೂ ಮತದಾರರಲ್ಲಿ ಮತ್ತು ಕಾರ್ಯಕರ್ತರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಚಿಕ್ಕಮಗಳೂರಿನಲ್ಲಿ ಮನವಿ ಮಾಡಿದರು.