ಚಿಕ್ಕಮಗಳೂರು: ಸಾಲ-ಸೋಲ ಮಾಡಿ ಹೇಗೋ ಕಷ್ಟಪಟ್ಟು ಬೆಳೆದಿದ್ದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ದರ ಸಿಗದಿದ್ದರಿಂದ ಮನನೊಂದ ರೈತರೊಬ್ಬರು ತಮ್ಮ ಎಲೆಕೋಸಿನ ಹೊಲಕ್ಕೆ ಟ್ರ್ಯಾಕ್ಟರ್ ಹೊಡೆಸಿರುವ ಮನಕಲಕುವ ಘಟನೆ ಜಿಲ್ಲೆಯ ಹಿರೇಗೌಜ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಹಿರೇಗೌಜ ಗ್ರಾಮದ ರೈತ ಬಸವರಾಜು ಎರಡು ಎಕರೆ ಹೊಲದಲ್ಲಿ ಕೋಸನ್ನು ಬೆಳೆದಿದ್ದರು. ಕಳೆದೊಂದು ವರ್ಷದಲ್ಲಿ ಇದು ನಾಲ್ಕನೇ ಬೆಳೆ. ಲಾಕ್‍ಡೌನ್‍ನಲ್ಲೂ ಕೋಸು ಬೆಳೆದಿದ್ದರು. ಆದ್ರೆ, ನಾಲ್ಕು ಬೆಳೆಯಲ್ಲಿ ಯಾವ ಬೆಳೆಯೂ ಒಂದು ರೂಪಾಯಿ ಲಾಭ ತರಲಿಲ್ಲ. ನಷ್ಟವೇ ಹೆಚ್ಚು. ನಷ್ಟ ಅಂದ್ರೆ ಹಾಕಿದ ಹಣವೂ ಇಲ್ಲದಂತೆ, ಮೂರ್ನಾಲ್ಕು ತಿಂಗಳು ನೀರು ಹಾಯಿಸಿ ಹಗಲಿರುಳು ಕಾದು ಬೆಳೆದ ಬೆಳೆಗೆ ಬೆಲೆ ಇಲ್ಲ ಅಂತ ಮನನೊಂದು ರೈತ ಬಸವರಾಜು ಭೂಮಿಗೆ ಗೊಬ್ಬರವಾದ್ರು ಆಗ್ಲಿ ಎಂದು ಇಡೀ ಎರಡು ಎಕರೆ ಹೊಲದ ತುಂಬಾ ಟ್ರ್ಯಾಕ್ಟರ್ ಹೊಡೆಸಿದ್ದಾರೆ.
ತನ್ನ ಎರಡು ಎಕರೆ ಹೊಲದಲ್ಲಿ ಕೋಸನ್ನು ಬೆಳೆಯಲು ಸುಮಾರು 40-50 ಸಾವಿರ ಹಣ ಖರ್ಚು ಮಾಡಿದ್ದಾರೆ. ಲಾಕ್‍ಡೌನ್ ವೇಳೆ ಕೆಲಸವಿಲ್ಲದೆ, ಹಣವಿಲ್ಲದೆ ಸಾಲ-ಸೋಲ ಮಾಡಿ ಬೆಳೆದ ಬೆಳೆ ಕೈ ಕೊಟ್ಟಿರುವುದರಿಂದ ಸಾಲದ ಭಯವೂ ಹುಟ್ಟಿದೆ. ಈ ಮಧ್ಯೆ ಗಗನ ಮುಟ್ಟಿರೊ ಬೀಜ ಹಾಗೂ ಗೊಬ್ಬರದ ದರ ರೈತರನ್ನು ಮತ್ತಷ್ಟು ಕಂಗಾಲಾಗಿಸಿತ್ತು. ಹೀಗಿದ್ರು, ಕೃಷಿ ಮೇಲಿನ ಪ್ರೀತಿಯಿಂದ ಬೆಳೆದ ಬೆಳೆ ಇಂದು ಕೃಷಿಯ ಬಗ್ಗೆ ಬೇಜಾರು ತರಿಸಿದೆ. ಚೀಲಕ್ಕೆ 30-40 ರೂಪಾಯಿ ಕೇಳ್ತಿರೋದು ರೈತರನ್ನ ಮತ್ತಷ್ಟು ಕಂಗೆಡಿಸಿದೆ. ಇದರಿಂದ ಬೇಸತ್ತ ಬಸವರಾಜು ಹೊಲದ ತುಂಬಾ ಟ್ರ್ಯಾಕ್ಟರ್ ಹೊಡೆಸಿ ಕೋಸಿನ ಬೆಳೆಯನ್ನ ಹೊಲಕ್ಕೆ ಗೊಬ್ಬರವಾಗಿಸಿದ್ದಾರೆ.
ಓದಿ: ಇಲ್ಲಿ ಯಾರೂ ಸತ್ಯಹರಿಶ್ಚಂದ್ರರಲ್ಲ : ಸುಧಾಕರ್ ಹೇಳಿಕೆಗೆ ಹೆಚ್ಡಿಕೆ ಪ್ರತಿಕ್ರಿಯೆ
ರೈತರು ಬೆಳೆದಿರುವ ಬೆಳೆಗಳಿಗೆ ಈಗಿರೋ ರೇಟ್ಗೆ ಕೂಲಿ ಕೊಡಲು ಆಗುವುದಿಲ್ಲ ಎಂದು ತಾವೇ ಮುಂದೆ ನಿಂತು ಮಕ್ಕಳಂತೆ ಬೆಳೆಸಿದ ಕೋಸಿನ ಫಸಲಿಗೆ ಟ್ರ್ಯಾಕ್ಟರ್ ಹತ್ತಿಸಿ ಸಂಪೂರ್ಣ ನಾಶ ಮಾಡಿದ್ದಾರೆ. ಸರ್ಕಾರ ಕೃಷಿ ಮಾರುಕಟ್ಟೆಗೆ ಹೊಸ-ಹೊಸ ಕಾನೂನುಗಳನ್ನು ತರುವ ಬದಲು ರೈತರ ಬೆಳೆಗಳಿಗೆ ಉತ್ತಮ ಬೆಲೆ ನಿಗದಿ ಮಾಡಿದರೆ ಬಡ ರೈತರು ನೆಮ್ಮದಿಯಾಗಿರಬಹುದು ಎಂಬ ಕೂಗು ರೈತರದ್ದಾಗಿದೆ.