ಚಿಕ್ಕಮಗಳೂರು: ಸಿದ್ಧಾರ್ಥ್ ತುಂಬಾ ಸ್ವಾಭಿಮಾನಿ ವ್ಯಕ್ತಿ. ಆದರೆ ಸಾವೊಂದೇ ಮಾರ್ಗ ಅಂತ ಸಿದ್ಧಾರ್ಥ್ ರವರು ನಿರ್ಧರಿಸಿದ್ದು ಮಾತ್ರ ಯಕ್ಷಪ್ರಶ್ನೆಯಾಗಿದೆ ಎದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.
ನಿನ್ನೆ ಚೇತನ ಹಳ್ಳಿಯಲ್ಲಿ ನಡೆದ ಸಿದ್ಧಾರ್ಥ್ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ ಅವರು, ಸಾವಿನಲ್ಲಾದ್ರು ಸಿದ್ಧಾರ್ಥ್ ಅವರಿಗೆ ಮುಕ್ತಿ ಸಿಗಲಿ ಅನ್ನೋದು ನಮ್ಮೆಲ್ಲರ ಪ್ರಾರ್ಥನೆ ಎಂದರು.
ತುಂಬಾ ಸ್ವಾಭಿಮಾನಿಯಾಗಿದ್ದ ವ್ಯಕ್ತಿ ಸಾವನ್ನ ಹುಡುಕಿಕೊಂಡು ಹೋಗಿದ್ದು ಮಾತ್ರ ದುರಂತ. ಎಲ್ಲರೊಂದಿಗೆ ಸ್ನೇಹ ಜೀವಿಯಾಗಿದ್ದ, ಬಡವ ಮತ್ತು ಶ್ರೀಮಂತ ಎಂಬ ತಾರತಮ್ಯ ಮಾಡದೆ ಎಲ್ಲರೊಂದಿಗೆ ಬೆರೆಯುತ್ತಿದ್ದರು. 96 ವರ್ಷದ ತಂದೆ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಾದ್ರೂ ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ರು.
ಇನ್ನು ತಾಯಿ ವಾಸಂತಿ ಅಮ್ಮ ದುಃಖ ಸಾಗರದಲ್ಲಿ ಮುಳುಗಿದ್ದಾರೆ. ಕೇತನಹಳ್ಳಿ ಎಷ್ಟೇಟ್ ತುಂಬಾ ದೊಡ್ಡದಿರುವುದರಿಂದ ನಾನು ಚಿಕ್ಕಮಗಳೂರಿನಲ್ಲಿ ಕರ್ತವ್ಯದಲ್ಲಿದ್ದಾಗ ಎಸ್ಟೇಟಿಗೆ ಪೊಲೀಸ್ ಬೀಟ್ ಹಾಕಿದ್ದೆ. ಸಾಮಾನ್ಯ ಪೊಲೀಸ್ ಹೋದರು ಕೂಡ ಮನೆಗೆ ಕರೆದು ಕಾಫಿ ಕೊಟ್ಟು ಸತ್ಕರಿಸಿ ನಂತರ ಅವರನ್ನ ಕಳುಹಿಸುತ್ತಿದ್ದರು. ಅಂತ ಮನಸ್ಸುಳ್ಳವರು ವಾಸಂತಿ ಅಮ್ಮ ಎಂದು ಅಣ್ಣಾಮಲೈ ಹೇಳಿದ್ರು.
ಸಿದ್ಧಾರ್ಥ್ ಅವರು ತಮ್ಮ ಶಿಕ್ಷಣ ಸಂಸ್ಥೆಗೆ ಯಾರೇ ಬಡ ವಿದ್ಯಾರ್ಥಿಗಳು ಬಂದರೂ ಕೂಡ ಅವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಶಿಕ್ಷಣ ಸಂಸ್ಥೆಯಲ್ಲಿ ಬಡಮಕ್ಕಳಿಗೆ ಪ್ರವೇಶಾತಿ ಕೊಡಿಸುವುದಾಗಿರಬಹುದು, ಬಡ ಕುಟುಂಬಗಳು ಬಂದರೆ ತಮ್ಮ ಎಸ್ಟೇಟ್ ಕೆಲಸ ಕೊಟ್ಟು ಅವರಿಗೊಂದು ಹೊಸ ಜೀವನ ರೂಪಿಸಿ ಕೊಡುತ್ತಿದ್ದರು.
ಇನ್ನು ನನ್ನ ಅವರ ಸಂಬಂಧ ಹೇಗಿತ್ತು ಎಂದರೆ ನಾನು ಸಾಕಷ್ಟು ಬಾರಿ ಅವರಿಂದ ಕೆಲವು ವಿಷಯಗಳಿಗೆ ಸಲಹೆ-ಸೂಚನೆ ಪಡೆಯುತ್ತಿದ್ದೆ. ಒಂದು ಬಾರಿ ರಸ್ತೆಬದಿಯಲ್ಲಿ ಕೂಡ ನನ್ನೊಂದಿಗೆ ಕಾಫಿ-ಟೀ ಕುಡಿಯುತ್ತಾ ಮಾತಾಡ್ತಿದ್ರು. ಅಷ್ಟು ಸರಳ ವ್ಯಕ್ತಿತ್ವವನ್ನು ಹೊಂದಿದ್ದವರು ಸಿದ್ದಾರ್ಥ್. ಅಂತಹ ಒಳ್ಳೆಯ ವ್ಯಕ್ತಿ ನಮ್ಮೆಲ್ಲರನ್ನು ಆಗಲಿರುವುದು ಬಹುದೊಡ್ಡ ದುರಂತ. ಕಾಫಿ ಡೇ ಕಂಪನಿ ಮತ್ತಷ್ಟು ಬೆಳೆಯಲಿ. ಪಂಚಭೂತಗಳಲ್ಲಿ ಲೀನವಾಗಿರುವ ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಅನ್ನೋದು ನಮ್ಮೆಲ್ಲರ ಪ್ರಾರ್ಥನೆ ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಸಿದ್ಧಾರ್ಥ್ ಅಗಲಿಕೆಗೆ ಮರುಕ ವ್ಯಕ್ತಪಡಿಸಿದರು.