ಚಿಕ್ಕಮಗಳೂರು: ದತ್ತ ಪೀಠ ಪ್ರಕರಣ ಸಂಬಂಧ ಹಿಂದೂ ಕಾರ್ಯಕರ್ತರಿಗೆ ಸಮನ್ಸ್ ಜಾರಿಯಾಗಿದ್ದರಿಂದ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಹಾಗೂ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
2017 ರಲ್ಲಿ ದತ್ತ ಜಯಂತಿ ವೇಳೆ ದತ್ತ ಪೀಠ ಪ್ರಕರಣ ಸಂಬಂಧ ಪೊಲೀಸರು 2023ರ ಅಕ್ಟೋಬರ್ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದ ಪ್ರಕರಣದ ವಿಚಾರಣೆಯನ್ನು ಚಿಕ್ಕಮಗಳೂರು ಜೆ.ಎಂ.ಎಫ್.ಸಿ. ಕೋರ್ಟ್ ಫೆಬ್ರವರಿ 7ಕ್ಕೆ ಮುಂದೂಡಿದೆ. 2017ರ ಡಿಸೆಂಬರ್ 3 ರಂದು ದತ್ತ ಜಯಂತಿ ವೇಳೆ ಹಿಂದೂ ಕಾರ್ಯಕರ್ತರು ಗೋರಿಗಳ ದ್ವಂಸ ಹಾಗೂ ನಿಷೇಧಿತ ಪ್ರದೇಶದಲ್ಲಿ ಭಗವಾಧ್ವಜ ಕಟ್ಟಿದ್ದಾರೆಂದು 14 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ, ಆ ಪ್ರಕರಣ ಸಂಬಂಧ ಪೊಲೀಸರು ಸರ್ಕಾರ ಅನುಮತಿ ನೀಡಿದ ಬಳಿಕ ಕೋರ್ಟ್ಗೆ 2023ರ ಅಕ್ಟೋಬರ್ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಚಾರ್ಜ್ ಶೀಟ್ ಸಲ್ಲಿಕೆ ಹಿನ್ನೆಲೆ ಕೊರ್ಟ್ 14 ಜನರಿಗೂ ಸೋಮವಾರ ಕೋರ್ಟಿಗೆ ಬರುವಂತೆ ಸಮನ್ಸ್ ನೀಡಿತ್ತು. 14 ಜನರಲ್ಲಿ ನಿನ್ನೆ ಕೋರ್ಟ್ಗೆ 12 ಜನ ಹಾಜರಾಗಿದ್ದರು.
ಸೋಮವಾರ ವಿಚಾರಣೆ ನಡೆಸಿದ ಕೋರ್ಟ್ ಪ್ರಕರಣವನ್ನು ಮುಂದಿನ ತಿಂಗಳು 7ನೇ ತಾರೀಖಿಗೆ ಮುಂದೂಡಿದೆ. ವಿಚಾರಣೆ ಬಳಿಕ ಆರೋಪಿಗಳ ಪರ ವಕೀಲ ಸುಧಾಕರ್ ಪೊಲೀಸರ ದೋಷಾರೋಪ ಪಟ್ಟಿಯಲ್ಲಿ ಸಾಕಷ್ಟು ಲೋಪ ದೋಷಗಳಿವೆ. ವಿಳಂಬ ತನಿಖೆ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟದ ಕೇಸ್ ಹಾಕಿದ್ದಾರೆ. ಆದರೆ, ಅಲ್ಲಿ ಆಗಿರುವ ಘಟನೆಗೂ ಪೊಲೀಸರು ಹಾಕಿರುವ ಕೇಸಿಗೂ ಸಂಬಂಧವೇ ಇಲ್ಲ. ಅಂದು ದತ್ತ ಪೀಠದ ಘಟನೆ ಬಗ್ಗೆ ಪೊಲೀಸರು ಎಲ್ಲಾ ವಿಡಿಯೋ ಮಾಡಿದ್ದಾರೆ. ಆದರೆ, ಕೋರ್ಟಿಗೆ ಕೇವಲ ಫೋಟೋಗಳ ಸಿಡಿ ನೀಡಿದ್ದಾರೆ. ವಿಳಂಬದ ಜೊತೆ ಸಾಕಷ್ಟು ಲೋಪ ದೋಷಗಳಿರುವ ಪೊಲೀಸರ ಚಾರ್ಜ್ ಶೀಟನ್ನು ಹೈ ಕೋರ್ಟ್ನಲ್ಲಿ ಚಾಲೆಂಜ್ ಮಾಡುತ್ತೇವೆ ಎಂದು ಹೇಳಿದರು.
ಜತೆಗೆ ಇದರ ವಿರುದ್ಧ ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಹೋರಾಟ ಮಾಡುತ್ತೇವೆ ಎಂದು ಹೇಳುತ್ತಿದ್ದು, ಮುಂದಿನ ದಿನಗಳಲ್ಲಿ ಯಾವೆಲ್ಲ ಬೆಳವಣಿಗೆಗಳು ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
ಒಟ್ಟಾರೆಯಾಗಿ, ದತ್ತ ಜಯಂತಿ ವೇಳೆ ಪೆಟ್ರೋಲ್ ಬಾಂಬ್ ಹಾಕಿದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಸರ್ಕಾರ ಅವರನ್ನು ಬಿಟ್ಟು, ಉದ್ದೇಶ ಪೂರ್ವಕವಾಗಿಯೇ ಹಿಂದು ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ದತ್ತಪೀಠ ಹೋರಾಟಗಾರರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಲೋಕಾಯುಕ್ತ ದಾಳಿ, ಬಿಇಒ ಕಚೇರಿ ಸಿಬ್ಬಂದಿ ವಶಕ್ಕೆ