ಚಿಕ್ಕಮಗಳೂರು : ಪ್ರವಾಸಿಗರ ಸ್ವರ್ಗವೆನಿಸಿಕೊಂಡಿರುವ ಚಿಕ್ಕಮಗಳೂರಿನಲ್ಲಿ ಹತ್ತಾರು ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಚಂದ್ರದ್ರೋಣ ಪರ್ವತ ಶ್ರೇಣಿ ಅಗ್ರಸ್ಥಾನದಲ್ಲಿದೆ. ಇಲ್ಲಿಗೆ ನಿತ್ಯವೂ ಆಗಮಿಸುವ ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನು ಸವಿಯೋದ್ರ ಜೊತೆ ಮಾಲಿನ್ಯಕ್ಕೆ ಕಾರಣಕರ್ತರಾಗಿದ್ದಾರೆ.
ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಬಾಟಲಿ, ತ್ಯಾಜ್ಯಗಳನ್ನ ಬಿಸಾಡಿ ಸುಂದರ ಗಿರಿ ಭಾಗವನ್ನು ಹಾಳು ಮಾಡುತ್ತಿದ್ದಾರೆ. ಹಾಗಾಗಿ, ಗಿರಿಯನ್ನು ಉಳಿಸುವ ನಿಟ್ಟಿನಲ್ಲಿ ಅವಧೂತ ವಿನಯ್ ಗುರೂಜಿ ನೇತೃತ್ವದಲ್ಲಿ ಇಡೀ ಜಿಲ್ಲಾಡಳಿತವೇ ಚಂದ್ರದ್ರೋಣ ಪರ್ವತವನ್ನು ಸ್ವಚ್ಛ ಮಾಡಿದೆ.
ಇಲ್ಲಿನ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಆದರೆ, ಈ ಸುಂದರ ಪರಿಸರ ಮಳಿನಗೊಂಡಿದೆ. ಹಾಗಾಗಿ, ಚಿಕ್ಕಮಗಳೂರು ಜಿಲ್ಲೆಯ ಅವಧೂತ ವಿನಯ್ ಗುರೂಜಿ ನೇತೃತ್ವದಲ್ಲಿ ಜಿಲ್ಲಾಡಳಿತದ ವತಿಯಿಂದ ದತ್ತಪೀಠವನ್ನು ಸಂಪೂರ್ಣ ಸ್ವಚ್ಛ ಮಾಡಲಾಗಿದೆ. ಸುಮಾರು 800 ಜನ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಸುಮಾರು 20 ಲೋಡ್‍ನಷ್ಟು ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ಸಿಕ್ಕಿದೆ.
ಇದೇ ತಿಂಗಳ 17-18-19ರಂದು ದತ್ತಪೀಠದಲ್ಲಿ ದತ್ತ ಜಯಂತಿ ನಡೆಯಲಿದೆ. ಆ ಹಿನ್ನೆಲೆಯಲ್ಲಿಯೂ ದತ್ತಭಕ್ತರಾಗಿರುವ ವಿನಯ್ ಗುರೂಜಿ ಈ ಪ್ಲಾಸ್ಟಿಕ್ ಮುಕ್ತ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ದತ್ತಪೀಠದಲ್ಲಿ ಪ್ಲಾಸ್ಟಿಕ್‍ಗಳನ್ನು ಆರಿಸಿ, ಶೌಚಾಲಯ ಕ್ಲೀನ್ ಮಾಡಿದರು. ಇಲ್ಲಿನ ಸೌಂದರ್ಯವನ್ನ ಸವಿಯಿರಿ. ಆದರೆ, ಹಾಳು ಮಾಡಬೇಡಿ ಎಂದು ಪ್ರವಾಸಿಗರಿಗೆ ಮನವಿ ಮಾಡಿಕೊಂಡರು.
ಈಗಾಗಲೇ ಜಿಲ್ಲಾಡಳಿತ ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧಿಸಿದೆ. ಅದಕ್ಕೆ ಮುನ್ನುಡಿಯಾಗಿ ಇಂದು ಸುಮಾರು 20 ಲೋಡ್‍ನಷ್ಟು ಪ್ಲಾಸ್ಟಿಕ್, ಬಾಟಲಿ, ಗಾಜುಗಳನ್ನ ಕ್ಲೀನ್ ಮಾಡಿದ್ದಾರೆ. ಕೈಮರದಿಂದ ದತ್ತಪೀಠಕ್ಕೆ ತೆರಳುವ ಸುಮಾರು 15 ಜಾಗಗಳಲ್ಲಿ ಬಿದ್ದಿದ್ದ ಕಸವನ್ನ ತೆಗೆದು ಸ್ವಚ್ಛ ಮಾಡಿದ್ದಾರೆ.
ಇದನ್ನೂ ಓದಿ: ಮಾರ್ಚ್ - ಮೇನಲ್ಲಿ ಕೊರೊನಾದಿಂದ ಹೊರಬರುವ ನಂಬಿಕೆ ಇದೆ: ವಿನಯ್ ಗುರೂಜಿ ವಿಶ್ವಾಸ
ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನು ಸವಿಯಿರಿ. ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮ ಭಕ್ತಿ-ಭಾವ ಮೆರೆಯಿರಿ. ಆದರೆ, ಯಾರು ಕೂಡ ಇಲ್ಲಿ ಕಸವನ್ನು ಹಾಕಿ ಈ ಸೌಂದರ್ಯವನ್ನು ಹಾಳು ಮಾಡಬೇಡಿ ಎಂದು ಜಿಲ್ಲಾಡಳಿತ ಕೂಡ ಪ್ರವಾಸಿಗರಿಗೆ ಮನವಿ ಮಾಡಿದೆ.