ಚಿಕ್ಕಮಗಳೂರು: ಜಿಲ್ಲೆಯ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಮುತ್ತೋಡಿ ವನ್ಯಜೀವಿ ಅಭಯಾರಣ್ಯದಲ್ಲಿ ಕಳೆದ ಏಳು ದಿನಗಳ ಹಿಂದೆ ಮರಿ ಆನೆಯೊಂದು ಸಾವನ್ನಪ್ಪಿದ್ದು, ನಿನ್ನೆ ಸಂಜೆ ವೇಳೆಗೆ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅಭಯಾರಣ್ಯದ ಜೇನುಕಲ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸುಮಾರು ಮೂರರಿಂದ ನಾಲ್ಕು ವರ್ಷದ ಗಂಡಾನೆ ಮರಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅರಣ್ಯ ಸಿಬ್ಬಂದಿ ಈ ಭಾಗದಲ್ಲಿ ಗಸ್ತು ತಿರುಗುವ ವೇಳೆ ಆನೆ ಕಳೆಬರ ಕಾಣಿಸಿಕೊಂಡಿದೆ. ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಸ್ಥಳಕ್ಕೆ ಅರಣ್ಯ ಉಪ ಸಂರಕ್ಷಣಾಧಿಕಾರಿ ತಾಖತ್ ಸಿಂಗ್ ರಾಣವತ್ ಹಾಗೂ ಜಿಲ್ಲಾ ಪಶು ವೈದ್ಯ ವಾಗೀಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳದಲ್ಲಿಯೇ ಶವ ಪರೀಕ್ಷೆ ನಡೆಸಿದ್ದು, ಹಿಂಡು ಹಿಂಡು ಆನೆಗಳು ಹೋಗುವಾಗ ಈ ಮರಿಯಾನೆಗೆ ಗಂಭೀರ ಗಾಯವಾಗಿದೆ. ಆನೆ ದೇಹದ ಮೇಲೆ ಹೆಚ್ಚಿನ ಗಾಯವಾದ ಹಿನ್ನೆಲೆ ನೋವಿನಿಂದ ಈ ಮರಿಯಾನೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಆನೆಯ ಎರಡೂ ದಂತವನ್ನು ಸಂರಕ್ಷಣೆ ಮಾಡಲಾಗಿದ್ದು, ಅರಣ್ಯಾಧಿಕಾರಿಗಳು ಸಾವನ್ನಪ್ಪಿದ್ದ ಸ್ಥಳದಲ್ಲಿಯೇ ಮರಿ ಆನೆಯ ಶವ ಸಂಸ್ಕಾರ ನೆರೆವೇರಿಸಿದ್ದಾರೆ.