ಚಿಕ್ಕಮಗಳೂರು: ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಬುದ್ದಿ ಜೀವಿಯೂ ಮಾತನಾಡಿಲ್ಲ. ಅವರೀಗ ಈಗ ಲದ್ದಿ ತಿನ್ನುತ್ತಿದ್ದಾರೆ. ಅವರ ಟಾರ್ಗೆಟ್ ಹಿಂದೂಗಳನ್ನು ಅವಹೇಳನ ಮಾಡುವುದಷ್ಟೇ ಎಂದು ಸಚಿವ ಸಿ.ಟಿ.ರವಿ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿನ ಬುದ್ದಿಜೀವಿಗಳು ಜಾತ್ಯತೀತತೆ, ಅಹಿಂದ ತತ್ವಗಳನ್ನು ಪಾಲಿಸುವುದಾಗಿ ಹೇಳಿಕೆ ನೀಡುತ್ತಾರೆ. ಈಗ ಇವರ ಅಹಿಂದ ಪ್ರೇಮ ಎಲ್ಲಿ ಹೋಗಿದೆ?. ಈ ಹಿಂದೆ ರೋಶನ್ ಬೇಗ್ ನೀಡಿದ ಒಂದು ಹೇಳಿಕೆಗೆ ಅವರನ್ನು ಅಮಾನತು ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷದ ದಲಿತ ಶಾಸಕನ ಮನೆಯ ಮೇಲಾದ ದೌರ್ಜನ್ಯಕ್ಕೆ ಯಾರೂ ಬಾಯಿ ಬಿಡದಿರಲು ಕಾರಣವೇನು?, ಇಷ್ಟೆಲ್ಲಾ ಆದರೂ ಈ ಬುದ್ದಿಜೀವಿಗಳು ಎಲ್ಲಿ ಅವಿತಿದ್ದಾರೆ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಈ ಗಲಭೆಗೆ ಸಂಬಂಧಪಟ್ಟಂತೆ ಶಾಸಕ ಜಮೀರ್ ಅಹಮದ್ ಮೇಲೆ ಆಕ್ರೋಶಗೊಂಡ ಸಚಿವರು, ಬಹುಶಃ ಜಮೀರ್ ಈ ಗಲಭೆಯ ಚಿತ್ರಣಕ್ಕೆ ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದಾರೆ. ತೊಟ್ಟಿಲು ತೂಗಿ ಮಗು ಚಿವುಟುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ, ಜಮೀರ್ ಅಹಮದ್ ಮಾಡುತ್ತಿರುವ ಕೆಲಸವೂ ಅದೇ ಆಗಿದೆ ಎಂದರು.
ಈ ಗಲಭೆಯಲ್ಲಿ ಉಂಟಾದ ನಷ್ಟವನ್ನು ಜಮೀರ್ ಅವರಿಂದಲೇ ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳೋಣ. ಅವರು ಎಲ್ಲರಿಗೂ ಸಹಾಯ ಮಾಡುವುದು ಮಾನವೀಯ ಸಂಬಂಧ ಎಂದು ಹೇಳಿಕೆ ನೀಡುತ್ತಾರೆ. ಆದರೆ ಯಾರಿಗೆ ಯಾವ ಸಂದರ್ಭದಲ್ಲಿ ಸಹಾಯ ಮಾಡುತ್ತಾರೆ ಎನ್ನುವುದು ಮುಖ್ಯ ಎಂದು ಅವರು ಹೇಳಿದರು.
ಗಲಭೆ ನಡೆದ ಸ್ಥಳದಲ್ಲಿದ್ದವರು ಅಮಾಯಕರು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅವರೆಲ್ಲರೂ ಅಮಾಯಕರಾಗಿದ್ದಲ್ಲಿ ಮನೆಯಲ್ಲಿ ಮಲಗಿರಬೇಕಿತ್ತು. ಆ ಸಮಯದಲ್ಲಿ ಅಲ್ಲಿಗೆ ಧಾವಿಸಿದ್ದಾದರೂ ಏಕೆ?, ಬಲಿಯಾದವರು ಅಮಾಯಕರಾದರೇ? ವಾಹನ ಸುಟ್ಟ ಕಿರಾತಕರು ಯಾರು? ಎಂದು ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.