ಚಿಕ್ಕಮಗಳೂರು : ಜಾತ್ರೆ, ದೇವಸ್ಥಾನಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ವಹಿವಾಟುಗಳ ನಿಷೇಧದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ವಿಚಾರದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ನಾಯಕರು ನಾನಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಈ ಅಭಿಯಾನಕ್ಕೆ ತಮ್ಮದೇ ಆದ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಹಿಂದುತ್ವದ ಪರ ಬ್ಯಾಟಿಂಗ್ ಮಾಡಿದ್ದಾರೆ.
ಹಿಂದೂ ದೇವಾಲಯಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಿರುವುದನ್ನು ಪ್ರಶ್ನಿಸುವ ನೈತಿಕತೆ ಮುಸ್ಲಿಮರಿಗೆಲ್ಲಿದೆ?, ಹಿಂದೂಗಳು ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಮರು ಅಲ್ಲಿ ಮಾಂಸ ಖರೀದಿ ಮಾಡುತ್ತಾರಾ?. ಹಿಂದೂಗಳ ಅಂಗಡಿಯಲ್ಲಿ ಅವರು ಮಾಂಸ ಖರೀದಿಸುವುದಿಲ್ಲ. ಅದು ನಮ್ಮ ದೇವರಿಗೆ ಆಗುವುದಿಲ್ಲ ಎನ್ನುತ್ತಾರೆ. ಹಾಗಾದರೆ ಅವರ ದೇವರಿಗೆ ಒಪ್ಪಿಸದ್ದನ್ನು ನಮ್ಮ ದೇವರು ಒಪ್ಪಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ. ಉಡುಪಿಯ ಗಂಗೊಳ್ಳಿ ಸುತ್ತಮುತ್ತ ಹಿಂದೂ ಮಹಿಳೆಯರ ಬಳಿ ಮೀನು ಖರೀದಿಸಬಾರದು ಎಂದು ಫರ್ಮಾನು ಹೊರಡಿಸಿದರು. ಅದಕ್ಕೆ ಪ್ರತಿ ಕ್ರಿಯೆಯಾಗಿ ಇದು ಬಂದಿದೆ. ಜಾತ್ಯತೀತತೆ, ಉದಾರತೆ ಎಲ್ಲವೂ ಬಹುಸಂಖ್ಯಾತ ಹಿಂದೂಗಳಿಗೆ ಮೋಸ ಮಾಡಲೆಂದೇ ಇಟ್ಟಿರುವ ಪದಗಳು. ಸಮಾನತೆ ಇಬ್ಬರಿಗೂ ಒಂದೇ ಇರಬೇಕು. ಏಕಪಕ್ಷೀಯವಾಗಿರಬಾರದು. ಹಿಂದೂಗಳಿಗೆ ಉದಾರತೆ ಪಾಠವನ್ನು ಯಾರೂ ಹೇಳಬೇಕಿಲ್ಲ ಎಂದರು.
ಅಂಬೇಡ್ಕರ್ ಈ ಪದ ಸೇರಿಸಿರಲಿಲ್ಲ: ಸಂವಿಧಾನದಲ್ಲಿ ಅಂಬೇಡ್ಕರ್ ಅವರು ಜಾತ್ಯತೀತತೆ ಎನ್ನುವುದನ್ನು ಹೇಳಲಿಲ್ಲ. ನಂತರ ತುರ್ತು ಪರಿಸ್ಥಿತಿ ಕಾಲಘಟ್ಟದಲ್ಲಿ ಕಾಂಗ್ರೆಸಿಗರು ಈ ಪದವನ್ನು ತಂದಿಟ್ಟರು. ಯಾಕೆಂದರೆ ಹಿಂದೂಗಳಿಗೆ ಮೋಸ ಮಾಡಲಿಕ್ಕೆ. ಆ ಶಬ್ದ ಇರಬೇಕೋ, ಬಿಡಬೇಕೋ ಎನ್ನುವುದು ಚರ್ಚೆ ಆಗಬೇಕು. ಜಾತ್ಯತೀತ ಪದ ಬರುವ ಮುಂಚೆ ದೇಶ ಕೋಮುವಾದಿ ದೇಶವಾಗಿತ್ತೇ?, ಈ ನೆಲದ ನಂಬಿಕೆಯಲ್ಲೇ ಸರ್ವಧರ್ಮ ಸಮಭಾವ ಇದೆ. ಇಲ್ಲಿ ಹುಟ್ಟಿದ ಯಾವ ಮತ ಧರ್ಮಗಳು ಸಹ ಇದೇ ಇರಬೇಕೆಂದು ಹೇಳಿಲ್ಲ. ಬಹುತ್ವವನ್ನೇ ಒಪ್ಪಿವೆ ಅದಕ್ಕೆ ನಮಗೆ ಸಿಕ್ಕ ಬಳುವಳಿ ಏನು ಎಂದು ಪ್ರಶ್ನಿಸಿದರು.
ಅವರು ಈಶ್ವರ ಅಲ್ಲಾ ತೇರೇ ನಾಮ್ ಎಂದಿದ್ದು ಕೇಳಿದ್ದೀರಾ?: ಮಹಾತ್ಮಗಾಂಧಿ ಅವರು ಹಿಂದೂಗಳ ಭಜನೆಯಲ್ಲಿ ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಂ, ಈಶ್ವರ ಅಲ್ಲಾ ತೇರೇನಾಮ್ ಎಂದು ಹೇಳಿದ್ದರು. ಇದನ್ನು ನಾವು ಎಲ್ಲ ಕಡೆ ಸಂಕೋಚ ಇಲ್ಲದೇ ಹೇಳುತ್ತೇವೆ. ಆದರೆ, ಯಾವುದಾದರೂ ಒಂದು ಮಸೀದಿಯಲ್ಲಿ ಈಶ್ವರ ಅಲ್ಲಾ ತೇರೇ ನಾಮ್ ಎಂದು ಹೇಳಿದ್ದನ್ನು ಕೇಳಿದ್ದೀರಾ ಎಂದರು. ಒಬ್ಬ ಮೌಲ್ವಿ, ಮುತಾವಲ್ಲಿ, ಮುಸ್ಲಿಂ ಧರ್ಮಗುರು ದೇವನೊಬ್ಬ ನಾಮ ಹಲವು ಎಂದು ಹೇಳಿದ್ದನ್ನು ಕೇಳಿದ್ದೀರಾ?. ಅಲ್ಲಾ ಮತ್ತು ಈಶ್ವರ ಎಂದು ಹೇಳಿದ್ದನ್ನು ಕೇಳಿದ್ದೀರಾ?. ಅವರು ಬಹುತ್ವವನ್ನು ಒಪ್ಪಿಕೊಳ್ಳದ ಮೇಲೆ ನಮಗೇಕೆ ಮೋಸ ಮಾಡಬೇಕು ಎಂದು ಪ್ರಶ್ನಿಸಿದರು.
ಇಸ್ಲಾಂನಲ್ಲಿ ಜಾತ್ಯತೀತ ಪದಕ್ಕೆ ಅರ್ಥವಿದೆಯೇ?. ಹಾಗಿದ್ದರೆ ಅವರು ಪ್ರತಿದಿನ ನಮಾಜ್ನಲ್ಲಿ ಅಲ್ಲಾ ಒಬ್ಬನೇ ದೇವರು ಎಂದು ಕೂಗುವುದೇಕೆ?. ಈಶ್ವರ, ಕೃಷ್ಣ, ರಾಮ ಹುಟ್ಟಿದ ಜಾಗದಲ್ಲಿ ಇದನ್ನು ಕೂಗುತ್ತಾರೆ. ಅದನ್ನು ಕೇಳಿಸಿಕೊಂಡು ಸುಮ್ಮನಿರಬೇಕು. ಅವರು ಮಾತ್ರ ಕೋಮುವಾದಿಗಳಾಗಿರಬೇಕು. ಹಿಂದೂಗಳು ಮಾತ್ರ ಜಾತ್ಯತೀತರಾಗಿಬೇಕೆ ಎಂದರು. ಮುಸ್ಲಿಮರು ಮಾತ್ರ ಹಿಂದೂಗಳ ಅಂಗಡಿಯಲ್ಲಿ ವ್ಯಾಪಾರ ಮಾಡಬಾರದು. ಹಿಂದೂಗಳೆಲ್ಲರೂ ಅವರ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಕೆ?, ಇದು ಕೊಡು ಕೊಳ್ಳುವ ನೀತಿ. ಏಕ ಪಕ್ಷೀಯವಲ್ಲ. ಅವರು ಬೇಲಿ ಹಾಕಿಕೊಂಡು ಇನ್ನೊಬ್ಬರ ಬುಟ್ಟಿಗೆ ಮಾತ್ರ ಕೈ ಹಾಕಲು ಬರುವುದಿಲ್ಲ. ನಮ್ಮ ಮೂಲ ನಂಬಿಕೆಯಲ್ಲೇ ದೇವನೊಬ್ಬ ನಾಮ ಹಲವು ಎಂದಿದೆ. ಇದು ಇಸ್ಲಾಂನಲ್ಲಿ ಇದೆಯಾ?. ಅದಿದ್ದರೆ ಜಗಳವೇ ಇರುವುದಿಲ್ಲವಲ್ಲ. ಅವರು ಅಳವಡಿಸಿಕೊಂಡಿರುವುದನ್ನು ಇನ್ನೊಬ್ಬರ ಮೇಲೆ ಹೇರಲು ಅವಕಾಶವಿದೆಯೇ ಎಂದು ಪ್ರಶ್ನಿಸಿದರು.
ಶೇ.90 ರಷ್ಟು ಹಿಂದೂಗಳು, ಶೇ.10 ರಷ್ಟು ಮುಸ್ಲಿಮರು ಇರುವ ಕಡೆ ಮುಸ್ಲಿಮರು ಸುರಕ್ಷಿತವಾಗಿದ್ದಾರೆ. ಆದರೆ, ಶೇ.50 ರಷ್ಟು ಹಿಂದೂಗಳು, ಶೇ.50 ರಷ್ಟು ಮುಸ್ಲಿಮರು ಇರುವ ಕಡೆ ಹಿಂದೂಗಳು ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಮುಸ್ಲಿಮರಿಗೆ ಪಾಕಿಸ್ತಾನವನ್ನು ಕೊಟ್ಟಮೇಲೂ ಅವರನ್ನು ಇಲ್ಲಿ ಉಳಿಸಿಕೊಂಡಿದ್ದು ನಮ್ಮ ಔದಾರ್ಯತನವಲ್ಲವೇ?, ಈ ಎಲ್ಲಾ ಸತ್ಯಗೊತ್ತಿದ್ದರೂ ಸೋಗಲಾಡಿತನದ ರಾಜಕಾರಣವನ್ನು ಕಾಂಗ್ರೆಸ್ ಮಾಡಬಹುದಾ ಎಂದು ಸಿ.ಟಿ ರವಿ ಪ್ರಶ್ನಿಸಿದರು.
ಇದನ್ನೂ ಓದಿ: ಜಮ್ಮು ಕಾಶ್ಮೀರ ಕುರಿತು ಪ್ರತಿಕ್ರಿಯಿಸಲು ಚೀನಾಕ್ಕೆ ಯಾವುದೇ ಹಕ್ಕಿಲ್ಲ: ಭಾರತ