ಚಿಕ್ಕಮಗಳೂರು: ನಗರ ಬಿಜೆಪಿ ಮಂಡಲದ ಮಹಿಳಾ ಮೋರ್ಚಾ ಉಪಾಧ್ಯಕ್ಷರಾಗಿ ಸಿ ಟಿ ರವಿ ಅವರ ಪತ್ನಿ ಪಲ್ಲವಿ ಸಿ.ಟಿ. ರವಿ ಅವರನ್ನು ನೇಮಕ ಮಾಡಲಾಗಿದೆ ಎಂದು ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ರಾಜೇಶ್ ಪ್ರಕಟಣೆಯಲ್ಲಿ ತಿಳಿಸಿದ್ದು, ಈ ಮೂಲಕ ಪಲ್ಲವಿ ಅವರು ಅಧಿಕೃತವಾಗಿ ರಾಜಕೀಯವನ್ನು ಪ್ರವೇಶವನ್ನು ಚಿಕ್ಕಮಗಳೂರಿನಲ್ಲಿ ಮಾಡಿದ್ದಾರೆ.
ಈ ಬೆಳವಣಿಗೆಯಿಂದ ಬಿಜೆಪಿಯಲ್ಲಿಯೂ ಕುಟುಂಬ ರಾಜಕಾರಣ ಇದಿಯಾ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಪ್ರಾರಂಭ ಮಾಡಿದ್ದು, ಈ ಕುರಿತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ನನ್ನ ಪತ್ನಿ ಬಿಜೆಪಿ ಪಕ್ಷದ ಇವತ್ತಿನ ಕಾರ್ಯಕರ್ತೆಯಲ್ಲ. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಹಿಂದಿನಿಂದಲೂ ಆಕೆ ಬಿಜೆಪಿ ಪಕ್ಷದ ಕಾರ್ಯಕರ್ತೆ ಎಂದಿದ್ದಾರೆ.
ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ಒಂದು ಸಣ್ಣ ಆರೋಪವೂ ನನ್ನ ಮೇಲೆ ಬಂದಿಲ್ಲ. ನನ್ನ ಕುಟುಂಬ ಕುಟುಂಬ ರಾಜಕಾರಣದ ವಿರುದ್ಧವಿದೆ. ಮೊದಲು ಕಾರ್ಯಕರ್ತರಿಗೆ ಆದ್ಯತೆ. ಪಕ್ಷದ ಕೆಲಸ ಮಾಡುವುದು ಕುಟುಂಬದ ರಾಜಕಾರಣನಾ?. ಪಕ್ಷದ ಕೆಲಸ ಮಾಡುವುದು ಬೇರೆ. ಎಲ್ಲಾ ಅಧಿಕಾರ ನನ್ನ ಬಳಿ ಇರಬೇಕು ಎನ್ನುವುದೇ ಬೇರೆ ಎಂದು ಸಿ.ಟಿ.ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಅಧಿಕಾರ ನಮ್ಮ ಬಳಿ ಇರಬೇಕು ಎಂದು ನಾವು ಭಾವಿಸಿಲ್ಲ. ಗ್ರಾಮ ಪಂಚಾಯಿತಿಗೆ ಚಿಕ್ಕಪ್ಪನ ಮಗ, ಜಿಲ್ಲಾ ಪಂಚಾಯಿತಿ ಬಂತು ಎಂದರೆ ಸೊಸೆ, ಎಂಎಲ್ಎ ಚುನಾವಣೆ ಬಂದರೆ ಅತ್ತಿಗೆ, ಎಂಪಿ ಚುನಾವಣೆ ಬಂದರೆ ಭಾವ, ಅದು ಕುಟುಂಬ ರಾಜಕಾರಣ. ನನಗೆ ಒಬ್ಬ ಅಣ್ಣನಿದ್ದಾನೆ ಇಲ್ಲಿಯವರೆಗೂ ಒಂದು ಲೆಟರ್ ಹೆಡ್ಗೂ ಕೂಡ ಇಲ್ಲಿವರೆಗೂ ನನ್ನ ಬಳಿ ಬಂದಿಲ್ಲ. ನನ್ನ ತಂದೆ, ತಾಯಿ ಇಲ್ಲಿಯವರೆಗೂ ನನ್ನ ಬಳಿ ಒಂದು ಶಿಫಾರಸು ಮಾಡಿಸಿಲ್ಲ ಎಂದು ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದಾರೆ.
ನನ್ನ ಅತ್ತೆ, ಮಾವ ಬೇಲೂರಿನಲ್ಲಿದ್ದು, ಅವರು ಒಂದು ಶಿಫಾರಸು ಮಾಡಿಸಿಲ್ಲ. ನನ್ನ ಕುಟುಂಬ ಹೇಗಿರಬೇಕು ಹಾಗಿದೆ. ನನ್ನ ಧರ್ಮಪತ್ನಿ ನನ್ನ ಬೆನ್ನೆಲುಬಾಗಿ ನಿಂತವಳು. ನನ್ನ ಗೈರು ಹಾಜರಿಯಲ್ಲಿ ನನ್ನನ್ನು ನೋಡಲು ಬಂದ ಜನರನ್ನು ಸಂಭಾಳಿಸಿ ಕಳಿಸುವವಳು ಅವಳು. ನನ್ನ ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕಿಗೆ ನನ್ನ ಅರ್ಧ ಶಕ್ತಿ ನನ್ನ ಪತ್ನಿ. ನಮ್ಮ ಮನೆಯಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದು ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಕೋವಿಡ್ ನಿಭಾಯಿಸಲು ನೇಮಕವಾಗಿದ್ದ ಹಲವು ವೈದ್ಯರು ಕರ್ತವ್ಯಕ್ಕೆ ಹಾಜರಾಗಲು ಹಿಂದೇಟು: ಕಾರಣ ಏನು?