ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆ ಸುರಿಯುತ್ತಿದೆ. ಪರಿಣಾಮ ನದಿಯ ನೀರಿನ ಮಟ್ಟದಲ್ಲಿಯೂ ಸಹ ಏರಿಕೆಯಾಗಿದೆ. ಇದರಿಂದ ಇಲ್ಲಿನ ಬಾಳೆಹೊನ್ನೂರು ಸಮೀಪ ಭದ್ರಾ ನದಿಯಲ್ಲಿ ಮೊಸಳೆಯೊಂದು ನದಿಯ ಮಧ್ಯೆ ಇರುವ ಬಂಡೆಯ ಮೇಲೆ ಬಂದು ಬಿಸಿಲು ಕಾಯಿಸುತ್ತಾ ಮಲಗಿದ್ದ ದೃಶ್ಯ ಕಂಡು ಬಂತು.
ಬಂಡೆ ಕಲ್ಲಿನ ಮೇಲೆ ಮಲಗಿರುವ ಮೊಸಳೆಯ ದೃಶ್ಯವನ್ನು ಸ್ಥಳೀಯರು ತಮ್ಮ ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದಾರೆ. ಮತ್ತೊಂದೆಡೆ ನದಿಯಲ್ಲಿ ಕಾಣಿಸಿಕೊಂಡ ಮೊಸಳೆಯಿಂದ ನದಿ ದಂಡೆಯಲ್ಲಿನ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಸ್ಥಳೀಯ ಅರಣ್ಯ ಇಲಾಖೆಗೆ ಜನರು ಈ ಬಗ್ಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಂಸದ ತ್ಯಾಜ್ಯವನ್ನು ನದಿಗೆ ಹಾಕುತ್ತಿರುವುದರಿಂದ ಮೊಸಳೆಗಳು ಮಾಂಸ ತಿನ್ನಲು ದಡಕ್ಕೆ ಬರುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೊಸಳೆ ಪ್ರತ್ಯಕ್ಷವಾಗಿರುವ ವಿಡಿಯೋ ವೈರಲ್ ಆಗಿದೆ.