ಚಿಕ್ಕಮಗಳೂರು: ಸಂಭ್ರಮ ಮತ್ತು ಹುಮ್ಮಸ್ಸಿನಿಂದ ಆಚರಿಸುತ್ತಿದ್ದ ಎತ್ತಿನಗಾಡಿ ಸ್ಪರ್ಧೆಯಲ್ಲಿ ನೊಗ ಬಡಿದು ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ. ಭರತ್ (25) ಮೃತ ಯುವಕ ಎಂದು ಗುರುತಿಸಲಾಗಿದೆ. ಅಜ್ಜಂಪುರ ಪಟ್ಟಣದಲ್ಲಿ ಜೋಡೆತ್ತಿನ ಗಾಡಿ ಓಟದ ಸಮಿತಿ ವತಿಯಿಂದ ಎತ್ತಿನಗಾಡಿ ಸ್ಪರ್ಧೆ ನಡೆಯುತ್ತಿತ್ತು. ಸಂಜೆ ಫೈನಲ್ ರೇಸಿನ ವೇಳೆ ಅಜ್ಜಂಪುರ ಮೂಲದ ಯುವಕ ಭರತ್ ಎತ್ತಿನ ಗಾಡಿಯ ಸ್ಪರ್ಧೆಯ ಎಂಡ್ ಪಾಯಿಂಟ್ ಬಳಿ ಎತ್ತಿನಗಾಡಿ ಗೆರೆ ದಾಟಿದ ಬಳಿಕ ಅದರ ನೊಗ ಹಿಡಿದು ನಿಲ್ಲಿಸಲು ಮುಂದಾಗಿದ್ದಾನೆ. ಈ ವೇಳೆ, ಎತ್ತುಗಳು ಶರವೇಗದಲ್ಲಿ ನುಗ್ಗಿ ಬಂದ ಪರಿಣಾಮ ನೊಗ ಹಿಡಿಯಲು ಹೋದ ಯುವಕನಿಗೆ ತಲೆಗೆ ಬಡಿದು ತೀವ್ರ ರಕ್ತ ಸ್ರಾವವಾಗಿದೆ.
ನೊಗ ಹೊಡೆದ ಕೂಡಲೇ ಎತ್ತಿನಗಾಡಿ ರೇಸ್ ಆಯೋಜಕರು ಹಾಗೂ ಸ್ಥಳೀಯರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಭರತ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಎತ್ತಿನಗಾಡಿ ರೇಸ್ ಆಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು: ಕಿರಿದಾದ ರಸ್ತೆಯಲ್ಲಿ ದಾರಿ ಕಾಣದೇ ಎರಡು ಅಪಘಾತ, ಪ್ರಯಾಣಿಕರಿಗೆ ಗಾಯ
ಖಾಸಗಿ ಬಸ್ ಹರಿದು ವಿದ್ಯಾರ್ಥಿನಿ ಸಾವು: ಇತ್ತೀಚಿಗೆ, ಬಸ್ಸಿಗಾಗಿ ಕಾಯುತ್ತ ನಿಂತಿದ್ದ ಶಾಲಾ ಮಕ್ಕಳ ಮೇಲೆ ಖಾಸಗಿ ಬಸ್ ಹರಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಾವಲ್ ದುಗ್ಲಾಪುರ ಗೇಟ್ನಲ್ಲಿ ನಡೆದಿತ್ತು. ಓವರ್ ಸ್ಪೀಡ್ನಿಂದ ಬಸ್ ಕಂಟ್ರೋಲ್ ತಪ್ಪಿದ್ದು, ಏಕಾಏಕಿ ಮಕ್ಕಳ ಮೇಲೆ ಹರಿದಿತ್ತು. ತುಳಸಿ (15) ಮೃತ ವಿದ್ಯಾರ್ಥಿನಿ. ಗಂಭೀರವಾಗಿ ಗಾಯಗೊಂಡಿದ್ದ ತುಳಸಿಯನ್ನು ಮೊದಲು ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಳು. ನಿವೇದಿತ (14) ಗಂಭೀರ ಗಾಯಗೊಂಡಿದ್ದು, ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ಉಳಿದವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದರು. ಏಕಾಏಕಿ ರಸ್ತೆ ಬದಿಯ ಬಸ್ ನಿಲ್ದಾಣ ಹಾಗೂ ಮನೆಗಳತ್ತ ಬಸ್ ನುಗ್ಗಿದ್ದು, ಡಿಕ್ಕಿ ರಭಸಕ್ಕೆ ಮನೆಯ ಮುಂಭಾಗದ ಮೇಲ್ಛಾವಣಿ ಸಂಪೂರ್ಣ ಜಖಂ ಆಗಿತ್ತು. ನಿಯಂತ್ರಣ ತಪ್ಪಿದ ಬಸ್ ಕಂಡು ರಸ್ತೆ ಬದಿ ಪ್ರಯಾಣಿಕರು ಚೆಲ್ಲಾಪಿಲ್ಲಿ ಆಗಿದ್ದರು. ವೇಗವಾಗಿ ಹೋಗುವ ಕೆಲ ಖಾಸಗಿ ಬಸ್ಗಳು ಹಾಗೂ ಚಾಲಕರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಬಸ್ನ ಗಾಜುಗಳನ್ನು ಪುಡಿಪುಡಿ ಮಾಡಿದ್ದರು.
ಸಾವನ್ನಪ್ಪಿದ ವಿದ್ಯಾರ್ಥಿನಿ ತುಳಸಿ ಬಾವಿಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ 9 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ತುಳಸಿ ತರೀಕೆರೆ ತಾಲೂಕಿನ ಸೀತಾಪುರ ಕಾವಲು ನಿವಾಸಿ ಆಗಿದ್ದು, ಮಂಜು ಲತಾ ದಂಪತಿಯ ಪುತ್ರಿ ಆಗಿದ್ದಾಳೆ. ಅಪಘಾತ ಸಂಭವಿಸುತ್ತಿದ್ದಂತೆ ಖಾಸಗಿ ಬಸ್ ಚಾಲಕ ಪರಾರಿಯಾಗಿದ್ದ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.