ಚಿಕ್ಕಮಗಳೂರು: ನಿನ್ನೆ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾದಿಂದ 72 ವರ್ಷದ ವೃದ್ಧೆ ಸಾವನ್ನಪ್ಪಿದ್ದರು. ಈಗ ವೃದ್ಧೆಯ 52 ವರ್ಷದ ಮಗನಿಗೂ ಕೊರೊನಾ ದೃಢಪಟ್ಟಿದೆ.
ಈಗ ವೃದ್ಧೆಯ ಟ್ರಾವೆಲ್ ಹಿಸ್ಟರಿ ಜಿಲ್ಲೆಯಲ್ಲಿ ಭಯ ಹುಟ್ಟಿಸಿದ್ದರೇ, ಇತ್ತ ಬೀರೂರು, ಅಜ್ಜಂಪುರ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ವೃದ್ಧೆಗೆ ಕೊರೊನಾ ಸೋಂಕು ತಗುಲಿತ್ತು ಎಂದು ಹೇಳಲಾಗುತ್ತಿದೆ.
ಚನ್ನಗಿರಿಯ ಕುಂಬಾರ ಬೀದಿಯಲ್ಲಿ ಮೃತ ವೃದ್ಧೆಯ ಮಗಳ ಮನೆಯಿದ್ದು, ವೃದ್ಧೆ ಮಗಳ ಮನೆಗೆ ತೆರಳಿದ್ದರು. ಅವರ ಎದುರು ಮನೆಯ 52 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿ ಶಿವಮೊಗ್ಗದಲ್ಲಿ ಮೃತಪಟ್ಟಿದ್ದರು. ಹೀಗಾಗಿ ಕುಂಬಾರು ಬೀದಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಚನ್ನಗಿರಿಯಲ್ಲಿ ವೃದ್ಧೆಗೆ ಆರೋಗ್ಯ ಸಮಸ್ಯೆ ಕಾಡಿದ್ದು, ಅಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಓದಿ:ಚಿಕ್ಕಮಗಳೂರಿನಲ್ಲಿ ಇಂದು ಮೂವರಿಗೆ ಕೊರೊನಾ: ಓರ್ವ ವೃದ್ಧೆ ಸಾವು
ಅಲ್ಲಿ ವಾಸಿಯಾಗದ ಕಾರಣ ಬೀರೂರಿಗೆ ಬಂದು ಸೋಮವಾರ ಪರಿಚಯವಿದ್ದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಂಗಳವಾರ ಅಜ್ಜಂಪುರದ ಖಾಸಗಿ ಆಸ್ಪತ್ರೆಯಲ್ಲಿ ವೃದ್ಧೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಂದೇ ಶಿವಮೊಗ್ಗದಲ್ಲಿ ಕೋವಿಡ್ ನಿಂದ ಸಾವು ಸಂಭವಿಸಿದ ಸುದ್ದಿ ಬರುತ್ತಿದ್ದಂತೆ, ವೃದ್ಧೆಯ ಗಂಟಲು ದ್ರವವನ್ನು ಆಸ್ಪತ್ರೆಯಲ್ಲಿ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಲಾಗಿತ್ತು.
ಬುಧವಾರ ಸಂಜೆ ಸುಮಾರಿಗೆ ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಗೆ ವೃದ್ಧೆಯನ್ನು ದಾಖಲು ಮಾಡಲಾಗಿತ್ತು. ಗುರುವಾರ ಸಂಜೆ ವೇಳೆಗೆ ಮೃತ ವೃದ್ಧೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ವೃದ್ಧೆ ಮೃತರಾಗಿದ್ದರು. ಅಜ್ಜಂಪುರ, ಬೀರೂರಿನ ಖಾಸಗಿ ಆಸ್ಪತ್ರೆ ಮಾತ್ರವಲ್ಲದೇ ಸರ್ಕಾರಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ.
ಮೂಲಗಳ ಮಾಹಿತಿ ಪ್ರಕಾರ ಮೃತ ವೃದ್ಧೆಗೆ ಒಟ್ಟು ಆರು ವೈದ್ಯರು ಹಾಗೂ ದಾದಿಯರು ಚಿಕಿತ್ಸೆ ನೀಡಿದ್ದರು. ಇವರಿಗೆ ಕೊರೊನಾ ಕಂಟಕ ಎದುರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ವೃದ್ಧೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ದಾದಿಯರು, ವೈದ್ಯರಿಂದ ಹೊರ ರೋಗಿಗಳಿಗೂ ಸೋಂಕು ಹರಡಿರುವ ಸಾಧ್ಯತೆಗಳಿವೆ.