ಚಿಕ್ಕಮಗಳೂರು: ಕೊರೊನಾ ಸೋಂಕಿತನೊಬ್ಬ ಹೋಂ ಐಸೋಲೇಷನ್ನಲ್ಲಿರದೇ ಓಡಾಟ ನಡೆಸಿದ್ದು, ಪ್ರಶ್ನಿಸಿದ ಅಧಿಕಾರಿಗಳ ಮೇಲೆ ದರ್ಪ ತೋರಿರುವ ಘಟನೆ ತಾಲೂಕಿನ ನೇರಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿನ ವ್ಯಕ್ತಿಯೊಬ್ಬನಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಆದರೆ ರಿಪೋರ್ಟ್ ಬರುವುದು ವಿಳಂಬವಾಗಿದ್ದು, ವರದಿ ಬರುವವರೆಗೂ ಮನೆಯಲ್ಲಿಯೇ ಇರು ಎಂದು ಅಧಿಕಾರಿಗಳು ಸೂಚನೆ ನೀಡಿದ್ದರು. ನಂತರ ಆತನಿಗೆ ಕೊರೊನಾ ಖಾತ್ರಿ ಆಗಿದ್ದು, ಮೊಬೈಲಿಗೆ ಮೆಸೇಜ್ ಕೂಡ ಕಳುಹಿಸಲಾಗಿತ್ತು.
ಇಂದು ಯೋಗಕ್ಷೇಮ ವಿಚಾರಿಸಲು ಅಧಿಕಾರಿಗಳು ಸೋಂಕಿತನ ಮನೆ ಬಳಿ ಹೋದಾಗ ಆತ ಮನೆಯಲ್ಲಿರಲಿಲ್ಲ. ತೋಟದಲ್ಲಿ ಕೆಲಸ ಮಾಡುವುದು, ರಸ್ತೆಯಲ್ಲಿ ಸಂಚಾರ ಮಾಡುವುದು ಮಾಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸಿದ್ದಾನೆ. ನಾನು ಹೊರಗಡೆ ಓಡಾಡ್ತೀನಿ ನೀವ್ಯಾರು ಕೇಳಬೇಡಿ. ನಾನು ಸತ್ತರೆ ಸಾಯುತ್ತೇನೆ ಬಿಡಿ, ನಿಮಗೇನು? ನಾನು ಮನೆಯಲ್ಲಿದ್ದರೆ ನಮ್ಮ ತೋಟಕ್ಕೆ ಗೊಬ್ಬರ ನೀವು ಹಾಕ್ತೀರಾ ಎಂದು ಅಧಿಕಾರಿಗಳನ್ನ ಪ್ರಶ್ನೆ ಮಾಡಿದ್ದಾನೆ.
ಈತನ ಮನೆಯಲ್ಲಿ ಇನ್ನೂ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತ ವ್ಯಕ್ತಿಯ ದಬ್ಬಾಳಿಕೆ ಕಂಡ ಅಧಿಕಾರಿಗಳು ಆತನ ವಿರುದ್ಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆತನಿಗೆ ಕೊರೊನಾ ಇರುವುದರಿಂದ ಚೇತರಿಸಿಕೊಂಡ ನಂತರ ಅಧಿಕಾರಿಗಳು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.