ಚಿಕ್ಕಮಗಳೂರು: ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ಉದ್ದೇಶದಿಂದ ಜಿಲ್ಲಾದ್ಯಂತ ಅರಿವು ಮೂಡಿಸಲು ಜಾಗೃತಿ ಅಭಿಯಾನಕ್ಕೆ ಸಚಿವ ಸಿಟಿ ರವಿ ಚಾಲನೆ ನೀಡಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೋವಿಡ್-19 ಜಾಗೃತಿ ಅಭಿಯಾನದ ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಚಾಲನೆ ನೀಡಿದರು. ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಚಿಕ್ಕಮಗಳೂರು ಇವರ ಸಹಯೋಗದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಕೋವಿಡ್-19 ಸೋಂಕಿನಿಂದ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದು, ಜಿಲ್ಲೆಯ ಜನತೆ ಸೋಂಕಿನ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಸಲುವಾಗಿ ಜಾಗೃತಿ ಅಭಿಯಾನ ಕೈಗೊಳಲಾಗಿದೆ. ಈ ಜಾಗೃತಿ ಅಭಿಯಾನದ ಮುಖ್ಯ ಉದ್ದೇಶ ಸೋಂಕು ಬೇರೆಯವರಿಗೆ ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು, ಯಾರಿಗಾದರೂ ಕೆಮ್ಮು, ಶೀತ, ನೆಗಡಿ, ಜ್ವರ, ಉಸಿರಾಟದ ತೊಂದರೆ ಸೇರಿದಂತೆ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಮಾಸ್ಕ್‌ಗಳನ್ನು ಧರಿಸಿ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು.
ಯಾವುದೇ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ, ಹುಷಾರ್ ಇಲ್ಲದವರ ಆರೈಕೆ ಮಾಡಿದ ಬಳಿಕ ಆಹಾರ ತಯಾರಿಸುವ ಹಾಗೂ ತಯಾರಿಸಿದ ನಂತರ ತಿನ್ನುವ ಮೊದಲು, ಪ್ರಾಣಿಗಳನ್ನು ಕೈಯಿಂದ ಮುಟ್ಟಿದಾಗ ಅವುಗಳ ಆರೈಕೆ ಮಾಡಿದಾಗ ಸ್ಯಾನಿಟೈಸರ್ ಅಥವಾ ಸೋಪಿನಿಂದ ಕೈತೊಳೆಯಬೇಕು ಎಂದು ಸಚಿವ ಸಿ.ಟಿ.ರವಿ ಜನರಲ್ಲಿ ಮನವಿ ಮಾಡಿದರು.