ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದೆ. ನಿರಂತರ ಮಳೆಯಿಂದಾಗಿ ಗುಡ್ಡ ಕುಸಿದು ಮನೆಯ ಒಳಗೆ ಮಣ್ಣು ನುಗ್ಗಿದ ಘಟನೆ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಯಡಿಯೂರು ಗ್ರಾಮದಲ್ಲಿ ನಡೆದಿದೆ.
ಸದ್ಯ ಮನೆಯ ಮಾಲೀಕ ಶರತ್ ಹಾಗೂ ಅವರ ಕುಟುಂಬ ಮನೆಯನ್ನು ಖಾಲಿ ಮಾಡಿದೆ. ಕಳೆದ ವರ್ಷವೂ ಸಹ ಇದೇ ಜಾಗದಲ್ಲಿ ಗುಡ್ಡ ಕುಸಿದು ಹಲವಾರು ಅವಾಂತರಗಳನ್ನು ಸೃಷ್ಟಿ ಆಗಿತ್ತು. ಮನೆಯ ಮುಂಭಾಗವೇ ಧರೆ ಕುಸಿದಿದ್ದು, ಮನೆಯ ಒಳಗೆ ಮಣ್ಣು ಹಾಗೂ ನೀರು ನುಗ್ಗಲು ಆರಂಭಿಸಿದೆ. ಮನೆ ಖಾಲಿ ಮಾಡಿದ ನಂತರ ಈ ಅವಘಡ ಜರುಗಿದ್ದು, ಜೀವ ಬದುಕಿತಲ್ಲ ಎಂದು ಮನೆಯ ಸದಸ್ಯರು ನಿಟ್ಟುಸಿರು ಬಿಡುವಂತಾಗಿದೆ.
ಇನ್ನು ಮೂಡಿಗೆರೆ ತಾಲೂಕಿನ ಕುದುರೆಮುಖ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳಸ ಸಮೀಪದ ಕೋಟೆ ಹೊಳೆ ಸಂಪೂರ್ಣ ಮುಳುಗಡೆಯಾಗಿದೆ. ಕೆಳಗೋಡು, ಕಾರ್ಲೆ, ಎಸ್ಕೆ ಮೇಘಲ್, ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತವಾಗಿದ್ದು, ಭದ್ರಾ ನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಕಳಸ ಪಟ್ಟಣಕ್ಕೆ ಬರುವ ನೂರಾರು ಜನರಿಗೆ ಸಂಪರ್ಕ ಕಡಿತವಾಗಿದ್ದು, ಕೋಟೆ ಹೊಳೆ ಸೇತುವೆ ಪ್ರವಾಹದಿಂದ ಸಂಪೂರ್ಣ ಮುಳುಗಡೆಯಾಗಿದೆ.
ಜಿಲ್ಲೆಯ ಭದ್ರಾ ನದಿಯ ಹರಿವಿನಲ್ಲಿ ಹೆಚ್ಚಳ ಉಂಟಾಗಿದ್ದು, ಬಾಳೆಹೊನ್ನೂರು- ಕಳಸ ಸಂಪರ್ಕ ಕಡಿತವಾಗಿದೆ. ಬಾಳೆಹೊನ್ನೂರಿನ ಮಹಲ್ ಗೋಡು ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಭದ್ರಾ ನದಿ ಹಾಗೂ ಬೆಟ್ಟದ ಮೇಲಿಂದ ಹರಿಯುತ್ತಿರುವ ನೀರಿನಿಂದ ಈ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಮಾಗುಂಡಿ ಗ್ರಾಮದ ಜನತೆ ಸಂಪೂರ್ಣ ಸಂಪರ್ಕವನ್ನು ಕಳೆದುಕೊಂಡಿದ್ದು, ತೆಪ್ಪದ ಮೂಲಕ ಹಾಲು ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಅಕ್ಕ ಪಕ್ಕದ ಗ್ರಾಮಸ್ಥರು ಸರಬರಾಜು ಮಾಡುತ್ತಿದ್ದಾರೆ. ಪ್ರವಾಹದ ನೀರನ್ನು ಲೆಕ್ಕಿಸದೇ ತೆಪ್ಪದ ಮೂಲಕ ಸ್ಥಳೀಯ ಯುವಕರು ವಸ್ತುಗಳ ಸಾಗಣೆ ಮಾಡುತ್ತಿದ್ದಾರೆ.