ಚಿಕ್ಕಮಗಳೂರು: 1996ರಿಂದ ಇಂದಿನವರೆಗೂ ಒಂದೇ ರೀತಿಯ ಕಾಫಿ ಬೆಲೆ ಇದ್ದು, ಉಳಿದ ಎಲ್ಲಾ ಬೆಳೆಗಳ ದರ ಹೆಚ್ಚಳವಾಗಿದೆ. ಕಾಫಿ ಬೆಲೆ ಮಾತ್ರ ಏರಿಕೆಯಾಗಿಲ್ಲ. ಕೊರೊನಾ ಹಿನ್ನೆಲೆ ಸಂಕಷ್ಟಕ್ಕೆ ಒಳಗಾಗಿದ್ದು, ಕೂಡಲೇ ಬೆಲೆ ಹೆಚ್ಚಳ ಮಾಡುವಂತೆ ಕಾಫಿ ಬೆಳೆಗಾರರು ಒತ್ತಾಯಿಸಿದರು.
ಇಂದು ಚಿಕ್ಕಮಗಳೂರಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಬೆಳೆಗಾರರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಏಳೆಂಟು ವರ್ಷಗಳಿಂದ ನಿರಂತರವಾಗಿ ಕಾಫಿ ಬೆಲೆ ಕುಸಿದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ತಾವು ಬೆಳೆದ ಬೆಳೆಯನ್ನು ಅತ್ಯಂತ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಸಿಲ್ವರ್ ಮರ, ಕಾಫಿ, ಮೆಣಸು ಯಾವುದಕ್ಕೂ ಬೆಲೆ ಇಲ್ಲ. ಮೋದಿಯವರು ಮೇಕ್ ಇನ್ ಇಂಡಿಯಾ ಘೋಷಣೆ ಮಾಡಿದ್ದಾರೆ. ಆದರೆ ಯಾವುದೇ ಯೋಜನೆಯಿಂದ ಉಪಯೋಗವಾಗುತ್ತಿಲ್ಲ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.
ಶ್ರೀಲಂಕಾ, ವಿಯೆಟ್ನಾಂ ಮೂಲಕ ಕಳ್ಳದಾರಿಯಲ್ಲಿ ಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ 700 ರೂ. ಇದ್ದ ಮೆಣಸಿನ ಬೆಲೆ ಇಂದು 300 ರೂಪಾಯಿಗಳಾಗಿವೆ. 30 ವರ್ಷಗಳಿಂದ ಬೆಳೆದ ಸಿಲ್ವರ್ ಮರಗಳಿಗೂ ಬೆಲೆ ಇಲ್ಲ. ಆಮದು ನೀತಿಯಿಂದ ಮೆಣಸಿಗೂ ಬೆಲೆ ಇಲ್ಲ. ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಇನ್ನು ಸರ್ಕಾರ ಜಿಲ್ಲೆಯಲ್ಲಿರುವ ಕಾಫಿ ಬೋರ್ಡ್ ಮುಚ್ಚಲು ಮುಂದಾಗಿದೆ. ಇದರಿಂದಾಗಿ ಸಿಗುತ್ತಿದ್ದ ಸವಲತ್ತುಗಳು ಸಿಗದಂತಾಗಿದೆ. ಅಕಾಲಿಕ ಮಳೆಯಿಂದ ಕಳೆದ ಮೂರು ವರ್ಷಗಳಿಂದ ಕಾಫಿ ಬಹುತೇಕ ನಾಶವಾಗಿದೆ. ಈ ಜನವರಿಯಲ್ಲೂ ಸುರಿದ ಅಕಾಲಿಕ ಮಳೆಯಿಂದ ಹಣ್ಣನ್ನು ಕೊಯ್ಯುವ ಮೊದಲೇ ಗಿಡ ಹೂವಾಗಿದೆ. ನಮ್ಮ ಬದುಕು ಅತಂತ್ರವಾಗಿದೆ. ಕೂಡಲೇ ಸರ್ಕಾರ ಬೆಳೆಗಾರರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.