ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ನಿರ್ದಿಷ್ಟ ಗುರಿಯಿಲ್ಲ. ಜನಪರ ಯೋಜನೆಗಳನ್ನು ರೂಪಿಸಬೇಕೆಂಬ ಜವಾಬ್ದಾರಿ ಇಲ್ಲ, ಜನರ ಬಗ್ಗೆ ಕಾಳಜಿಯೂ ಇಲ್ಲ. ಕೇವಲ ಎಟಿಎಂ ರನ್ ಮಾಡಲು ಮಾತ್ರ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದಾರೆ ಎಂದು ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಸಮ್ಮಿಶ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ರಮಡ ರೆಸಾರ್ಟ್ಗೆ ಆಗಮಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಒಂದು ವೇಳೆ ದೋಸ್ತಿಗಳ ಬಳಿ ಮ್ಯಾಜಿಕ್ ನಂಬರ್ ಇದ್ದಲ್ಲಿ ಬುಧವಾರದವರೆಗೆ ಕಾಯುವ ಅಗತ್ಯವಿಲ್ಲ. ಸೋಮವಾರ ಬಹುಮತ ಸಾಬೀತುಪಡಿಸಬಹುದು. ಇವರ ವರ್ತನೆ ನೋಡಿದರೆ ಅವರ ಬಳಿ ಮ್ಯಾಜಿಕ್ ನಂಬರ್ ಇಲ್ಲ. ದೋಸ್ತಿಗಳು ಏನೇ ಮಾಡಿದರು ಅದು ಬರೀ ಸರ್ಕಸ್ ಆಗತ್ತೆ ಸಕ್ಸಸ್ ಆಗಲ್ಲ. ಹೀಗಾಗಿ ಸಭಾಧ್ಯಕ್ಷರು ಆದಷ್ಟು ಬೇಗ ನಿರ್ಣಯ ಕೈಗೊಳ್ಳಬೇಕು ಎಂದರು.
ಎಂಟಿಬಿ ಹೇಳಿಕೆ ಗಮನಿಸಿದ್ದೇನೆ. ಅವರು ಎಲ್ಲೂ ಕಾಂಗ್ರೆಸ್ ಜೊತೆ ಇರುತ್ತೆನೆಂದು ಹೇಳಿಲ್ಲ. ರಾಜೀನಾಮೆ ಅಂಗೀಕರಿಸಬೇಕೆಂದು ಸುಪ್ರಿಂಕೋರ್ಟ್ಗೆ ಅರ್ಜಿ ಸಲ್ಲಿಸಿರುವುದು ಎಲ್ಲರಿಗೂ ಗೊತ್ತಿದೆ. ಎಂಟಿಬಿಯವರನ್ನು ಕರೆತಂದಿದ್ದು ಬಿಟ್ಟರೆ ರಾಜೀನಾಮೆ ಹಿಂಪಡೆಯುತ್ತೇನೆಂದು ಹೇಳಿಸಲು ಸಾಧ್ಯವಾಗಲಿಲ್ಲ ಎಂದರು .
ಸಭಾಧ್ಯಕ್ಷರು ಕಾರಣ:
ಈ ಎಲ್ಲ ರಾಜಕೀಯ ಅನಿಶ್ಚಿತತೆಗೆ ಸಭಾಧ್ಯಕ್ಷರು ಕಾರಣ. ಹೀಗಾಗಿ, ಸಭಾಧ್ಯಕ್ಷರು ಆದಷ್ಟು ಬೇಗ ನಿರ್ಣಯ ಕೈಗೊಳ್ಳಬೇಕು ಎಂದ ಅವರು, ದೋಸ್ತಿ ಸರ್ಕಾರ ಉಳಿಯುವ ಮಾತೇ ಇಲ್ಲ ಎಂದು ಹೇಳಿದರು.