ಚಿಕ್ಕಮಗಳೂರು: ರಾಜ್ಯದಲ್ಲೆಡೆ ಕೊರೊನಾ ಭೀತಿಯಿಂದ ಪ್ರತಿ ಜಿಲ್ಲಾಡಳಿತದ ವತಿಯಿಂದ ಗ್ರಾಮಾಂತರ ಗಡಿ ರಸ್ತೆಗಳನ್ನು ಬಂದ್ ಮಾಡಲು ಮುಂದಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯಿಂದ ಹಾಸನ ಜಿಲ್ಲೆ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗುತ್ತಿದೆ.
ಹಾಸನ ಜಿಲ್ಲೆ ಸಂಪರ್ಕಿಸುವ ಗಡಿಯಲ್ಲಿನ ಗ್ರಾಮಾಂತರ ರಸ್ತೆಗಳನ್ನು ಬಂದ್ ಮಾಡಿದ್ದು, ಜಿಲ್ಲಾಡಳಿತದ ವತಿಯಿಂದ ಜೆಸಿಬಿ ಮೂಲಕ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆಗಳಿಗೆ ಅಡ್ಡಲಾಗಿ ಮಣ್ಣು ಸುರಿದು ಈ ಕ್ರಮ ತೆಗೆದುಕೊಳ್ಳುತ್ತಿದ್ದು, ಪೊಲೀಸ್ ಭದ್ರತೆಯಲ್ಲಿ ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದು ರಸ್ತೆ ಸಂಪೂರ್ಣ ಬಂದ್ ಮಾಡಲಾಗುತ್ತಿದೆ.
ಈ ನಡುವೆ ಕೆಲ ಯುವಕರು ಹುಚ್ಚು ಸಾಹಸಕ್ಕೆ ಕೈ ಹಾಕಿ ಕಾರನ್ನು ಮಣ್ಣಿನಲ್ಲಿ ಲಾಕ್ ಆಗುವಂತೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು-ಹಾಸನ ಗಡಿ ಹನಿಕೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೊರ ಜಿಲ್ಲೆ ಸಂಪರ್ಕಿಸುವ ಗ್ರಾಮೀಣ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ.
ಮಣ್ಣಿನ ರಾಶಿ ಮೇಲೆ ಕಾರು ಹತ್ತಿಸಲು ಹೋಗಿ ಕಾರ್ ಲಾಕ್ ಆಗಿದೆ. ಕಾರಿನ ಚಾರ್ಸಿ ಮಣ್ಣಿಗೆ ಸಿಲುಕಿದ ಕಾರಣ ಕಾರಿನಲ್ಲಿದ್ದ ಯುವಕರು ಕಾರಿನಲ್ಲಿಯೇ ಕೂರುವಂತಾಗಿದೆ. ಸ್ಥಳೀಯರು ಎಷ್ಟೇ ಪ್ರಯತ್ನ ಮಾಡಿದರೂ ಕಾರು ಹೊರ ತರಲು ಸಾಧ್ಯವಾಗಿಲ್ಲ. ಕಾರ್ಯಾಚರಣೆ ಮುಂದುವರೆದಿದೆ.