ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರನ್ನು ಅಮಾನತು ಮಾಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಲ್ಮರುಡಪ್ಪ ಆದೇಶ ಹೊರಡಿಸಿದ್ದಾರೆ. ಪಕ್ಷದ ಆಂತರಿಕ ತೀರ್ಮಾನವನ್ನ ಉಲ್ಲಂಘಿಸಿದ ಕಾರಣ ನೋಟಿಸ್ ನೀಡಿ, ಅಮಾನತು ಆದೇಶ ಹೊರಡಿಸಲಾಗಿದೆ. ಬಿಜೆಪಿ ಪಕ್ಷಕ್ಕೂ ಅವರಿಗೂ ಇಂದಿನಿಂದ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಜಿಲ್ಲಾಧ್ಯಕ್ಷರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
20 ವರ್ಷಗಳಿಂದ ಸಿ ಟಿ ರವಿ ಆಪ್ತ ವಲಯದಲ್ಲಿ ವರಸಿದ್ದಿ ವೇಣುಗೊಪಾಲ್ ಗುರುತಿಸಿಕೊಂಡಿದ್ದರು. ಇನ್ನೊಬ್ಬರಿಗೆ ಅವಕಾಶ ನೀಡುವ ಸಲುವಾಗಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ವೇಣುಗೋಪಾಲ್ಗೆ ರಾಜೀನಾಮೆ ನೀಡಲು ಪಕ್ಷ ಅವರಿಗೆ ಸೂಚಿಸಿತ್ತು. ಈ ವೇಳೆ ವೇಣುಗೋಪಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಯಾರಿಗೂ ತಿಳಿಯದ ರೀತಿ ರಾಜೀನಾಮೆ ವಾಪಸ್ ಪಡೆದು ಕೊಂಡಿದ್ದರು.
ಎರಡು ಬಾರಿ ರಾಜೀನಾಮೆ ನೀಡಿರುವ ವೇಣುಗೋಪಾಲ್, ಅಂಗೀಕಾರ ಆಗುವ ಮುನ್ನವೇ ರಾಜೀನಾಮೆ ವಾಪಸ್ ಪಡೆದು ಪಕ್ಷದ ಸದಸ್ಯರ ಆಕ್ರೋಶಕ್ಕೆ ಗುರಿಯಾಗಿದ್ದರು. ರಾಜೀನಾಮೆ ಹಿಂಪಡೆದು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಕೆಲ ದಿನಗಳಿಂದ ಚಿಕ್ಕಮಗಳೂರು ನಗರದಿಂದ ಕಣ್ಮರೆಯಾಗಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷರ ಏನು ಹೇಳ್ತಾರೆ?: ನಗರಸಭೆ ಅಧ್ಯಕ್ಷ ಸ್ಥಾನದ ಅಧಿಕಾರದ ಅವಧಿಯನ್ನು ಮೊದಲು 18 ತಿಂಗಳು, ಎರಡನೇ ಅವಧಿ 12 ತಿಂಗಳು ಜಿಲ್ಲಾ ಬಿಜೆಪಿಯಲ್ಲಿ ವಿಭಜನೆ ಮಾಡಿ ತೀರ್ಮಾನಿಸಲಾಗಿತ್ತು. 18 ತಿಂಗಳ ಬಳಿಕ ರಾಜೀನಾಮೆ ನೀಡದೇ ವೇಣು ಗೋಪಾಲ್ ನಾಟಕ ಆಡಿದ್ದರು. ಇದರಿಂದ ಪಕ್ಷ ವಿರೋಧಿ ಚಟುವಟಕೆ ಮಾಡಿ, ಮುಜುಗರ ಉಂಟು ಮಾಡಿದ್ದರು. ಈ ವೇಳೆ ಬಿಜೆಪಿ 17 ಸದಸ್ಯರು ಅವಿಶ್ವಾಸ ಮಂಡನೆಗೆ ಮುಂದಾಗಿದ್ದರು.
ಕಳೆದ 20 ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿದ್ದ ಚಿಕ್ಕಮಗಳೂರು ನಗರಸಭೆ ಇದೆ. ಈಗ ಪಕ್ಷದಲ್ಲಿ ವಿವಿಧ ಬೆಳವಣಿಗೆಗಳು ನಡೆಯಲು ಪ್ರಾರಂಭವಾಗಿದೆ. ಬಿಜೆಪಿ ಪಕ್ಷಕ್ಕೂ ಅವರಿಗೂ ಈಗ ಯಾವುದೇ ರೀತಿಯ ಸಂಬಂಧವಿಲ್ಲ. ನಿನ್ನೆ ಅವರ ಜೊತೆ ಕುಳಿತು ಕಡೆ ಪ್ರಯತ್ನವನ್ನು ಮಾಡಿದ್ದೇವೆ. ಮಾಜಿ ಶಾಸಕ ಸಿ ಟಿ ರವಿ ಅವರು ಕೂಡ ಅವರ ಮನಸ್ಸು ಒಲಿಸುವ ಪ್ರಯತ್ನ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಅವರ ಬೆನ್ನಹಿಂದೆ ಯಾರಿದ್ದಾರೆ ಎಂಬುದು ಸಹ ತಿಳಿಯುತ್ತಿಲ್ಲ. ಮುಂದೆ ಏನು ಆಗುತ್ತೆ ಎಂಬುದನ್ನು ಕಾದು ನೋಡೋಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ತಿಳಿಸಿದ್ದಾರೆ.
ಐದು ವಿಧಾನಸಭೆ ಅಭ್ಯರ್ಥಿಗಳು ಸೋಲಿಗೆ ಜಿಲ್ಲಾಧ್ಯಕ್ಷರು ಕಾರಣ: ವರಸಿದ್ಧಿ ವೇಣುಗೋಪಾಲ್ - ಅಮಾನತು ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ’’ನನಗೆ ಅಮಾನತು ಮಾಡುವ ಮೊದಲು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಅವರನ್ನು ಅಮಾನತು ಮಾಡಬೇಕು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಸೋಲಿಸಿದ್ದು ಜಿಲ್ಲಾಧ್ಯಕ್ಷರು. ಅವರು ಪಕ್ಷದ ಕೆಲಸ ಹಾಗೂ ಸಂಘಟನೆ ಮಾಡಿದ್ದರೆ ಯಾಕೆ ನಮ್ಮ ಅಭ್ಯರ್ಥಿಗಳು ಸೋಲುತ್ತಿದ್ದರು.
ಪಕ್ಷದ ಸಂಘಟನೆ ಮಾಡಲು ಬೇರೆಯವರಿಗೆ ಅವಕಾಶ ಮಾಡಿ ಕೊಡಿ. ಪಕ್ಷದಲ್ಲಿ ಯಾವುದೇ ಜಾತಿಯನ್ನು ತರಬೇಡಿ. ನಾನು 32 ವರ್ಷಗಳ ಕಾಲ ಪಕ್ಷಕ್ಕಾಗಿ ಧ್ವಜಗಳನ್ನು ಕಟ್ಟಿದ್ದೇನೆ. ಎರಡೂವರೆ ವರ್ಷ ಅಧಿಕಾರ ಅವಧಿಯನ್ನು ಪೂರ್ಣ ಕೊಡಿ ಎಂದು ನಾನು ಮೊದಲೇ ಕೇಳಿ ಕೊಂಡಿದ್ದೆನು. ಅಧಿಕಾರ ಹಂಚಿಕೆ ಬಗ್ಗೆ ನನ್ನ ಬಳಿ ಯಾವುದೇ ರೀತಿಯ ಚರ್ಚೆ ಮಾಡಿಲ್ಲ. ನನ್ನ ಬೆನ್ನ ಹಿಂದೆ ಯಾರೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂಓದಿ:ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣ: ಮಾಹಿತಿ ಸಂಗ್ರಹಕ್ಕೆ ತಂಡ ನೇಮಿಸಿದ ರಾಜ್ಯ BJP