ಚಿಕ್ಕಮಗಳೂರು : ಜಿಲ್ಲೆಯ ಅಯ್ಯನಕೆರೆಯಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ವತಿಯಿಂದ ಕೈಗೊಂಡಿರುವ ಸಾಹಸ ಕ್ರೀಡಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಚಾಲನೆ ನೀಡಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತಿವೃಷ್ಟಿಯ ಸಂದರ್ಭದಲ್ಲಿ ನಾನು ಜಿಲ್ಲೆಯಲ್ಲೇ ಇದ್ದು, ಇಲ್ಲಾಗುತ್ತಿರುವ ಅವಘಡಗಳ ಕುರಿತು ಕ್ಷಣ ಕ್ಷಣದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಳ್ಳುತ್ತಿದ್ದೇನೆ. ಚಿಕ್ಕಮಗಳೂರು ತಾಲೂಕಿನಲ್ಲಿ ಇನ್ನೂ ಅಂದುಕೊಂಡಷ್ಟು ಮಳೆಯಾಗಿಲ್ಲ. ಆದರೆ, ಕೊಪ್ಪ, ಮೂಡಿಗೆರೆ ತಾಲೂಕಿನಲ್ಲಿ ಎರಡು ದಿನಗಳ ಕಾಲ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ, ಸದ್ಯ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಸಂಪೂರ್ಣ ಸ್ಥಳ ಪರಿಶೀಲನೆ ಮಾಡುತ್ತೇನೆ, ಜಿಲ್ಲೆಯ ಜನ ಹೆದರಬಾರದು ಎಂದರು.
ಕಳೆದ 4 ದಿನಗಳಿಂದ ಜಿಲ್ಲೆಯ ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಕೊಪ್ಪ, ಶೃಂಗೇರಿಯಲ್ಲಿ ಧಾರಾಕಾರ ಮಳೆ ಸುರಿದು, ನೂರಕ್ಕೂ ಹೆಚ್ಚು ಮನೆಗಳು ಮಣ್ಣುಪಾಲಾಗಿವೆ. ಹತ್ತಾರು ರಸ್ತೆಗಳು ಮತ್ತು ಕೆಲ ಗ್ರಾಮಗಳ ಸೇತುವೆಗಳು ಮುರಿದು ಬಿದ್ದು, ಸಂಪರ್ಕವೇ ಕಡಿದು ಹೋಗಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಮಾತ್ರ ಒಂದು ದಿನವೂ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಜನರಿಗೆ ಸಾಂತ್ವನ ಹೇಳದೆ ಬೆಂಗಳೂರಿನಲ್ಲೇ ಕುಳಿತಿದ್ದಾರೆ ಎಂಬ ಆರೋಪ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.