ಚಿಕ್ಕಮಗಳೂರು : ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಪಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ. ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು ಎಂಬಂತೆ ಜವರಾಯನ ಅಟ್ಟಹಾಸಕ್ಕೆ ಸ್ನೇಹಿತನ ಮಾತು ಮೀರದೆ ಅವನ ಗೆಳೆಯನಿಗೆ ಪರಿಚಯಸ್ಥರಾದ ಯುವತಿಯನ್ನು ಕರೆತರಲು ಹೋಗಿದ್ದ ಯುವಕ ಮತ್ತು ಅವನೊಂದಿಗೆ ಬೈಕ್ ಏರಿದ ಹುಡುಗಿ ಸಹ ಬಾರದ ಲೋಕಕ್ಕೆ ತೆರಳಿರುವ ದುರಂತ ನಡೆದಿದೆ.
ಲಾರಿ ಹಾಗು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ತರೀಕೆರೆ ತಾಲೂಕಿನ ಕಟ್ಟೆಹೊಳೆ ಗೇಟ್ ಬಳಿ ಈ ದುರಂತ ಮಂಗಳವಾರ ತಡರಾತ್ರಿ ಸಂಭವಿಸಿದೆ. ಮೃತರನ್ನು ವಿಶ್ವಾಸ್ (24) ಮತ್ತು ದೀಪಿಕಾ (22) ಎಂದು ಗುರುತಿಸಲಾಗಿದೆ.
ಸಾವನ್ನಪ್ಪಿದ ದೀಪಿಕಾ ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮೂಲದವರಾಗಿದ್ದು, ತರೀಕೆರೆ ತಾಲೂಕಿನ ಬೆಲೇನಹಳ್ಳಿ ನಿವಾಸಿ ಕಾರ್ತಿಕ್ ಸ್ನೇಹಿತೆ. ಮೃತ ವಿಶ್ವಾಸ್ ಕೂಡ ಕಾರ್ತಿಕ್ ಸ್ನೇಹಿತ. ಇಂದು ಶಿವಮೊಗ್ಗದಲ್ಲಿ ವೃತ್ತಿಗೆ ಸಂಬಂಧಿಸಿದ ಸಂದರ್ಶನ ಇತ್ತು ಎಂಬ ಕಾರಣಕ್ಕೆ ದೀಪಿಕಾ ತನ್ನ ಮತ್ತೊಬ್ಬ ಸ್ನೇಹಿತೆ ಜೊತೆ ಗುಂಡ್ಲುಪೇಟೆಯಿಂದ ತರೀಕೆರೆಗೆ ಆಗಮಿಸಿದ್ದರು. ಇಬ್ಬರು ಯುವತಿಯರು ಬಂದಿದ್ದ ಕಾರಣ ಮೃತ ವಿಶ್ವಾಸ್ ಸ್ನೇಹಿತ ಕಾರ್ತಿಕ್, ಇಬ್ಬರನ್ನು ತರೀಕೆರೆಯಿಂದ ಬೇಲೆನಹಳ್ಳಿಗೆ ಎರಡು ಬೈಕಿನಲ್ಲಿ ಕರೆದುಕೊಂಡು ಬರಲು ವಿಶ್ವಾಸ್ ನನ್ನು ಕರೆದುಕೊಂಡು ಹೋಗಿದ್ದನು.
ಬಳಿಕ ಕಾರ್ತಿಕ್ ಹಾಗೂ ಮತ್ತೋರ್ವ ಯುವತಿ ಮನೆಗೆ ಬಂದಿದ್ದಾರೆ. ಆದರೆ, ವಿಶ್ವಾಸ್ ಹಾಗೂ ದೀಪಿಕಾ ಬೇಲೆನ ಹಳ್ಳಿಗೆ ಬರುವಾಗ ಕಟ್ಟೆಹೊಳೆಯ ಗೇಟ್ ಬಳಿ ಲಾರಿಗೆ ಡಿಕ್ಕಿಯಾಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಪರ್ಯಾಸವೆಂದರೇ ಮೃತ ದೀಪಿಕಾ ಹಾಗೂ ವಿಶ್ವಾಸ್ ಗೆ ಒಬ್ಬರಿಗೊಬ್ಬರು ಗೊತ್ತೇ ಇಲ್ಲ. ಈ ಮೊದಲು ಪರಿಚಯವೂ ಇರಲಿಲ್ಲ. ಸ್ನೇಹಿತನ ಸ್ನೇಹಿತೆಯನ್ನು ಕರೆ ತರಲು ಹೋದಾಗ ಈ ದುರ್ಘಟನೆ ಸಂಭವಿಸಿದ್ದು, ಕಾರ್ತಿಕ್ ನ ಸ್ನೇಹಿತ ಹಾಗೂ ಸ್ನೇಹಿತೆ ಇಬ್ಬರೂ ಸಾವನ್ನಪ್ಪಿದ್ದಾರೆ. ಸಾವಿನ ಸುದ್ದಿ ತಿಳಿದು ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಅಪಘಾತ ಮಾಹಿತಿ ತಿಳಿದು ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತ ದೇಹಗಳನ್ನು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಪ್ರಕರಣವನ್ನು ದಾಖಲಿಸಿ ಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : ಸ್ನೇಹಿತರ ಜಾಲಿ ರೈಡ್ಗೆ ಫುಡ್ ಡೆಲಿವರಿ ಬಾಯ್ ಬಲಿ.. ಅಪಘಾತ ಎಸಗಿ ಮೃತದೇಹ 100 ಮೀಟರ್ ಎಳೆದೊಯ್ದರು!