ಚಿಕ್ಕಮಗಳೂರು : ಎಸ್ಎಸ್ಎಲ್ ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕ ಪಡದೆ ಇಲಾಖೆ ನೀಡಿರುವ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಾಳೆಯಿಂದ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ನಗರ ವ್ಯಾಪ್ತಿಯ 23, ಗ್ರಾಮೀಣ ವ್ಯಾಪ್ತಿಯ 35 ಸೇರಿದಂತೆ ಒಟ್ಟು 58 ಪರೀಕ್ಷಾ ಕೇಂದ್ರಗಳಿದ್ದು, ಅವುಗಳಲ್ಲಿ 32 ಸರ್ಕಾರಿ ಶಾಲೆಗಳು, 7 ಅನುದಾನಿತ ಪ್ರೌಢಶಾಲೆಗಳು ಹಾಗೂ 19 ಅನುದಾನ ರಹಿತ ಪ್ರೌಢಶಾಲೆಗಳಿವೆ. ಇವುಗಳಲ್ಲಿ 13,924 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಪರೀಕ್ಷಾ ಕೇಂದ್ರಕ್ಕೆ 746 ಮೇಲ್ವಿಚಾರಕರು, ಕಸ್ಟೋಡಿಯನ್‌ಗಳು, ಸ್ಥಾನಿಕ ಜಾಗೃತ ದಳ, ಮುಖ್ಯ ಅಧೀಕ್ಷಕರು, ಮೊಬೈಲ್ ಸ್ವಾಧೀನಾಧಿಕಾರಿಗಳು, ಅಂತರ ಇಲಾಖಾ ವೀಕ್ಷಕರಗಳನ್ನಾಗಿ ತಲಾ 58 ಜನರನ್ನು, 8 ಜನ ಬ್ಲಾಕ್ ನೋಡೆಲ್ ಅಧಿಕಾರಿಗಳು, 5 ಜಿಲ್ಲಾ ಜಾಗೃತ ದಳದ ಅಧಿಕಾರಿಗಳ ತಂಡ, 23 ಪ್ರಶ್ನೆ ಪತ್ರಿಕಾ ಮಾರ್ಗಾಧಿಕಾರಿಗಳ ತಂಡ ರಚಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ 130 ಬಸ್ ಮಾರ್ಗಾಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಸಹಾಯಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್‌ನ 4 ಜನ ಸ್ವಯಂ ಸೇವಕರು ನೇಮಿಸಲಾಗಿದೆ.
ವಿದ್ಯಾರ್ಥಿಗಳ ಹಾಗೂ ಪರೀಕ್ಷಾ ಸಿಬ್ಬಂದಿಗಳ ಆರೋಗ್ಯ ತಪಾಸಣೆ ನಡೆಸಲು ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜೊತೆಗೆ ಸಹಾಯಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಪ್ರತಿ ಪರೀಕ್ಷಾ ಕೇಂದ್ರಕ್ಕೆ 50 ರಂತೆ ಎನ್ 65 ಮಾಸ್ಕ್‌ನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಹೈಕೋರ್ಟ್‌ನ ನಿರ್ದೇಶನದಂತೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜೇಶನ್, ಥರ್ಮಲ್ ಸ್ಕ್ಯಾನಿಂಗ್ ನಡೆಸುವುದರೊಂದಿಗೆ 35.5 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ಉಷ್ಣತೆಯುಳ್ಳವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ, ಜ್ವರ, ಶೀತ, ಕೆಮ್ಮು ಉಳ್ಳವರಿಗೆ ಪರೀಕ್ಷಾ ಕೇಂದಗಳಲ್ಲಿ 2 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ತುರ್ತು ಚಿಕಿತ್ಸೆಗೆ ತಾಲೂಕಿಗೆ ಒಂದರಂತೆ ತುರ್ತು ಚಿಕಿತ್ಸಾ ವಾಹನವನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.