ಚಿಕ್ಕಮಗಳೂರು: ಕಳೆದ ಹತ್ತು ವರ್ಷಗಳ ಹಿಂದೆ ಬತ್ತಿ ಕಣ್ಮರೆಯಾಗಿದ್ದ ನೀರಿನ ಮೂಲವನ್ನು ತಾಲೂಕಿನ ಸ್ಥಳೀಯ ಯುವಕರು ಹುಡುಕಿದ್ದಾರೆ. ತಾಲೂಕಿನ ಸಿದ್ದಪ್ಪನ ಬೆಟ್ಟದಿಂದ ಹರಿದು ಬರ್ತಿದ್ದ ನೀರಿನ ಮೂಲ ಸಿಕ್ಕಿದ್ದು ಸ್ಥಳೀಯ ಗ್ರಾಮಗಳಿಗೆ ಮರಳುಗಾಡಿನಲ್ಲಿ ನೀರು ಸಿಕ್ಕಂತಾಗಿದೆ.
ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ಸರಿಯಾದ ಸಮಯಕ್ಕೆ ಮಳೆ ಬಾರದೇ ಭೀಕರ ಬರ ಆವರಿಸಿದ್ದು, ಜನರು ಹಾಗೂ ಜಾನುವಾರುಗಳು ಕುಡಿಯೋ ನೀರಿಗೂ ಪರದಾಟ ನಡೆಸುವಂತಾಗಿತ್ತು. ಇದೀಗ ಈ ಗ್ರಾಮದಲ್ಲಿ ನೀರಿನ ಮೂಲ ಹುಡುಕಲು ತಾಲೂಕಿಗೆ ಹೊಯ್ಸಳ ಅಡ್ವೆಂಚರಸ್ ಕ್ಲಬ್ ಆಯೋಜಿಸಿದ್ದು, ಚಾರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ ವನ್ಯ ಜೀವ ಛಾಯಾಗ್ರಾಹಕ ಹಿರೇಗೌಜ ಶಿವು ನೇತೃತ್ವದಲ್ಲಿ ಗ್ರಾಮದ 35 ಯುವಕರು ಈ ಗ್ರಾಮದ ಸುತ್ತ ಮುತ್ತಲಿನ ಕಾಡು ಮೇಡುಗಳಲ್ಲಿ ಅಲೆದು ನೀರಿನ ಮೂಲ ಹುಡುಕಿಕೊಂಡಿದ್ದಾರೆ.
ಸದ್ಯ ಸಿದ್ದಪ್ಪನ ಬೆಟ್ಟದಲ್ಲಿ ನೀರಿನ ಮೂಲ ಸಿಕ್ಕಿದ್ದು, ಅಲ್ಲಿ ನೀರು ಇಂದಿಗೂ ಹರಿಯುತ್ತಿದೆ. ಈ ಮೂಲವನ್ನು ಹುಡುಕಿದ ಗ್ರಾಮದ ಯುವಕರ ಈ ಕೆಲಸಕ್ಕೆ ಗ್ರಾಮದ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.